ಪುಣೆಯಲ್ಲಿ ಲೆಕ್ಸಸ್ ಇಂಡಿಯಾದ ನೂತನ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ ಉದ್ಘಾಟನೆ; ಮಹಾರಾಷ್ಟ್ರದಲ್ಲಿ ಬ್ರ್ಯಾಂಡ್ ವಿಸ್ತರಣೆಗೆ ಮತ್ತಷ್ಟು ಬಲ

0
14

ಪುಣೆ : ಭಾರತದ ಐಷಾರಾಮಿ ವಾಹನ ಮಾರುಕಟ್ಟೆಯಲ್ಲಿ ತನ್ನ ಗ್ರಾಹಕ ಸೇವೆ ಮತ್ತು ಮಾರುಕಟ್ಟೆ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಲೆಕ್ಸಸ್ ಇಂಡಿಯಾ ಪುಣೆಯಲ್ಲಿ ನೂತನ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ (GEC) ಅನ್ನು ಉದ್ಘಾಟಿಸಿದೆ. ನವೆಂಬರ್ 5ರಂದು ನಡೆದ ಈ ಉದ್ಘಾಟನೆಯೊಂದಿಗೆ ಮಹಾರಾಷ್ಟ್ರದಲ್ಲಿ ಲೆಕ್ಸಸ್ ತನ್ನ ಗ್ರಾಹಕ ಸಂಪರ್ಕ ಜಾಲವನ್ನು ವಿಸ್ತರಿಸಿದೆ.

ಭಾರತ್ ಟೊಯೋಟಾ ಟ್ಸುಶೋ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ (ಲೆಕ್ಸಸ್ ಭಾರತ್) ವತಿಯಿಂದ ಈ ಕೇಂದ್ರವನ್ನು ಆರಂಭಿಸಲಾಗಿದೆ. ಕಿರ್ಲೋಸ್ಕರ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಟೊಯೋಟಾ ಟ್ಸುಶೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಜಪಾನ್‌ನ ಟೊಯೋಟಾ ಟ್ಸುಶೋ ಕಾರ್ಪೊರೇಷನ್ ನಡುವಿನ ಜಂಟಿ ಸಹಭಾಗಿತ್ವದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಕಿರ್ಲೋಸ್ಕರ್ ಸಿಸ್ಟಮ್ಸ್ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಗೀತಾಂಜಲಿ ವಿಕ್ರಮ್ ಕಿರ್ಲೋಸ್ಕರ್, ಟೊಯೋಟಾ ಟ್ಸುಶೋ ಇಂಡಿಯಾದ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಜುನ್ ಶಿರಾಟೋರಿ, ಲೆಕ್ಸಸ್ ಭಾರತ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಚಿವಿಕುಲ ಮತ್ತು ಲೆಕ್ಸಸ್ ಇಂಡಿಯಾ ಅಧ್ಯಕ್ಷ ಹಿಕಾರು ಇಕೆಉಚಿ ಅವರು ಜಂಟಿಯಾಗಿ ನೂತನ ಕೇಂದ್ರವನ್ನು ಉದ್ಘಾಟಿಸಿದರು.

ಮುಂಬೈ ಬಳಿಕ ಮಹಾರಾಷ್ಟ್ರದಲ್ಲಿ ಆರಂಭಗೊಂಡಿರುವ ಲೆಕ್ಸಸ್‌ನ ಎರಡನೇ ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್ ಇದಾಗಿದೆ. ಇತ್ತೀಚೆಗೆ ಅಹಮದಾಬಾದ್ ಮತ್ತು ಸೂರತ್ ನಗರಗಳಲ್ಲಿ ಕೇಂದ್ರಗಳನ್ನು ಆರಂಭಿಸಿದ ಬಳಿಕ ಪುಣೆಯಲ್ಲಿ ತನ್ನ ಜಾಲವನ್ನು ವಿಸ್ತರಿಸಿರುವುದು ಸಂಸ್ಥೆಯ ಪ್ರಮುಖ ಹೆಜ್ಜೆಯಾಗಿದೆ.

ಲೆಕ್ಸಸ್‌ನ ‘ಸರಳ ಆದರೆ ಭವ್ಯ’ ಹಾಗೂ ‘ಸೂಕ್ಷ್ಮ ಆದರೆ ಸಮೃದ್ಧ’ ಎಂಬ ವಿನ್ಯಾಸ ತತ್ವದಡಿ ರೂಪುಗೊಂಡಿರುವ ಈ ಕೇಂದ್ರವು ಆಧುನಿಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶಿಷ್ಟ ಆತಿಥ್ಯ ವ್ಯವಸ್ಥೆಯನ್ನು ಒಳಗೊಂಡಿದೆ. ಜಪಾನ್‌ನ ಒಮೊಟೆನಾಶಿ ಆತಿಥ್ಯ ಸಂಸ್ಕೃತಿ ಹಾಗೂ ಭಾರತದ ‘ಅತಿಥಿ ದೇವೋ ಭವ’ ಪರಂಪರೆಯನ್ನು ಸಂಯೋಜಿಸಿ ಗ್ರಾಹಕರಿಗೆ ವಿಭಿನ್ನ ಅನುಭವ ನೀಡುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಲೆಕ್ಸಸ್ ಇಂಡಿಯಾ ಅಧ್ಯಕ್ಷ ಹಿಕಾರು ಇಕೆಉಚಿ, ಭಾರತದ ಐಷಾರಾಮಿ ವಾಹನ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರು ಉತ್ತಮ ಉತ್ಪನ್ನಗಳ ಜೊತೆಗೆ ವಿಶಿಷ್ಟ ಸೇವೆ ಮತ್ತು ಅನುಭವಗಳನ್ನು ನಿರೀಕ್ಷಿಸುತ್ತಿದ್ದಾರೆ. ಪುಣೆಯಲ್ಲಿ ನೂತನ ಕೇಂದ್ರ ಆರಂಭಿಸುವ ಮೂಲಕ ಗ್ರಾಹಕರೊಂದಿಗೆ ಇನ್ನಷ್ಟು ಆಳವಾದ ಬಾಂಧವ್ಯ ಬೆಳೆಸಲು ಹಾಗೂ ಲೆಕ್ಸಸ್‌ನ ಐಷಾರಾಮಿ ಅನುಭವವನ್ನು ಹತ್ತಿರವಾಗಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಲೆಕ್ಸಸ್ ಭಾರತ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಚಿವಿಕುಲ ಮಾತನಾಡಿ, ದೇಶದಲ್ಲಿ ಲೆಕ್ಸಸ್‌ನ ಬೆಳವಣಿಗೆಗೆ ಈ ಕೇಂದ್ರ ಹೊಸ ಅಧ್ಯಾಯವಾಗಿದ್ದು, ಜಾಗತಿಕ ಮಟ್ಟದ ಐಷಾರಾಮಿ ಮಾರಾಟ ಮತ್ತು ಗ್ರಾಹಕ ಸೇವಾ ಮಾನದಂಡಗಳನ್ನು ಕಾಯ್ದುಕೊಳ್ಳುವುದು ಸಂಸ್ಥೆಯ ಪ್ರಮುಖ ಗುರಿಯಾಗಿದೆ ಎಂದರು.

ನೂತನ ಕೇಂದ್ರಕ್ಕೆ ಭೇಟಿ ನೀಡುವ ಗ್ರಾಹಕರು ಲೆಕ್ಸಸ್‌ನ ವಿವಿಧ ಐಷಾರಾಮಿ ವಾಹನಗಳನ್ನು ವೀಕ್ಷಿಸುವುದರ ಜೊತೆಗೆ ಸಂಸ್ಥೆಯ ಕರಕುಶಲತೆ, ಆಧುನಿಕ ತಂತ್ರಜ್ಞಾನ ಮತ್ತು ವಿದ್ಯುದೀಕರಿಸಿದ ವಾಹನಗಳ ವಿಶೇಷತೆಗಳನ್ನು ತಿಳಿದುಕೊಳ್ಳಬಹುದು. ಪುಣೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಲೆಕ್ಸಸ್ ಸರ್ವಿಸ್ ಪಾಯಿಂಟ್ ಮೂಲಕ ವಾಹನಗಳ ನಿರ್ವಹಣಾ ಸೇವೆಯನ್ನೂ ಪಡೆಯಬಹುದು.

ಪ್ರಸ್ತುತ ಲೆಕ್ಸಸ್ ಇಂಡಿಯಾ ಮುಂಬೈ, ನವದೆಹಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಚಂಡೀಗಢ, ಕೊಚ್ಚಿ, ಅಹಮದಾಬಾದ್, ಸೂರತ್ ಮತ್ತು ಪುಣೆ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಒಟ್ಟು 10 ಗೆಸ್ಟ್ ಎಕ್ಸ್‌ಪೀರಿಯನ್ಸ್ ಸೆಂಟರ್‌ಗಳನ್ನು ನಿರ್ವಹಿಸುತ್ತಿದೆ. ಇದರೊಂದಿಗೆ ದೇಶಾದ್ಯಂತ 19 ಲೆಕ್ಸಸ್ ಸರ್ವಿಸ್ ಪಾಯಿಂಟ್‌ಗಳ ಮೂಲಕ ಮಾರಾಟೋತ್ತರ ಸೇವಾ ಜಾಲವನ್ನೂ ಬಲಪಡಿಸಿದೆ.

ಗ್ರಾಹಕರಿಗೆ ಐದು ವರ್ಷಗಳ ರಸ್ತೆಬದಿ ನೆರವು, ಟೋಯಿಂಗ್, ಟ್ಯಾಕ್ಸಿ ಸೇವೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸಂಸ್ಥೆ ಒದಗಿಸುತ್ತಿದೆ. ಅಲ್ಲದೆ, ಎಲ್ಲಾ ಮಾದರಿಗಳ ಮೇಲೆ 8 ವರ್ಷ ಅಥವಾ 2 ಲಕ್ಷ ಕಿ.ಮೀ. ವಾಹನ ಮತ್ತು ಹೈಬ್ರಿಡ್ ಬ್ಯಾಟರಿ ವಾರಂಟಿ ಸೌಲಭ್ಯವನ್ನು ನೀಡುತ್ತಿದೆ. ಆರ್‌ಎಕ್ಸ್, ಎನ್‌ಎಕ್ಸ್ ಮತ್ತು ಇಎಸ್ ಮಾದರಿಗಳಿಗೆ ಅಶ್ಯೂರ್ಡ್ ಬೈ ಬ್ಯಾಕ್ ಯೋಜನೆಯನ್ನೂ ಪರಿಚಯಿಸಿದೆ.

ಇದರ ಜೊತೆಗೆ ಕಂಫರ್ಟ್, ರಿಲ್ಯಾಕ್ಸ್ ಮತ್ತು ಪ್ರೀಮಿಯರ್ ಎಂಬ ಮೂರು ಆಯ್ಕೆಗಳೊಂದಿಗೆ ಲೆಕ್ಸಸ್ ಲಕ್ಸರಿ ಕೇರ್ ಸೇವಾ ಪ್ಯಾಕೇಜ್‌ಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಈ ಮೂಲಕ ಭಾರತದ ಐಷಾರಾಮಿ ವಾಹನ ಮಾರುಕಟ್ಟೆಯಲ್ಲಿ ತನ್ನ ಗ್ರಾಹಕ ಸೇವೆ ಮತ್ತು ಬ್ರ್ಯಾಂಡ್ ಅನುಭವವನ್ನು ಮತ್ತಷ್ಟು ವಿಸ್ತರಿಸಲು ಲೆಕ್ಸಸ್ ಇಂಡಿಯಾ ಮುಂದಾಗಿದೆ.