ಎ.ಕೆ.ಪಿ.ಎ. ವೆಸ್ಟ್ ಯುನಿಟ್‌ ವತಿಯಿಂದ ಮಕ್ಕಳ ದಿನಾಚರಣೆ ಆಚರಣೆ

0
3

ಕಾಸರಗೋಡು : ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್ (AKPA) ಕಾಸರಗೋಡು ವೆಸ್ಟ್ ಯುನಿಟ್ ಆಶ್ರಯದಲ್ಲಿ ನವಂಬರ್ 14 ಮಕ್ಕಳ ದಿನಾಚರಣೆಯನ್ನು ಆಯೋಜಿಸಲಾಯಿತು.

ಕಾಸರಗೋಡು ಜಿಲ್ಲಾ ಕಚೇರಿ ಎ.ಕೆ.ಪಿ.ಎ. ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ದೇಶದ ಭವಿಷ್ಯದ ಆಧಾರಸ್ತಂಭಗಳಾದ ಮಕ್ಕಳ ದಿನಾಚರಣೆಯನ್ನು ಸದಸ್ಯರು ಬಹಳ ಸಂತೋಷದಿಂದ ಶಿಶು ದಿನವಾಗಿ ಆಚರಿಸಿದರು. ಮಕ್ಕಳ ಮನಸ್ಸಿನ ಮುಗ್ಧತೆ ಮತ್ತು ಸೃಜನಶೀಲತೆಯನ್ನು ಆಚರಿಸುವ ಈ ಶುಭ ದಿನದಂದು, ನಮ್ಮ ನಾಡಿಗೆ ದೊಡ್ಡ ಹೆಮ್ಮೆ ತಂದುಕೊಟ್ಟ ಪುಟ್ಟ ಪ್ರತಿಭೆಯನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಕೇವಲ ಎರಡು ವರ್ಷ ವಯಸ್ಸಿನಲ್ಲಿಯೇ ಅಸಾಧಾರಣ ಸಾಧನೆ ಮಾಡಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-2026’ ಸಾಧನೆ ತಲುಪಿದ ಪುಟ್ಟ ಚುರುಕಿ, ನೈಹ ಸಫಿಯ ನವಾಲ್ (ಫಾತಿಮತ್ ಹಫ ಅಡ್ಕ – ನವಾಲ್ ರಹಿಮಾನ್ ದಂಪತಿಗಳ ಮಗಳು) ಬಾಲಕಿಗೆ ಯುನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಸನ್ಮಾನ ಪತ್ರ ಹಾಗೂ ಎಕೆಪಿಎ ಕಾಸರಗೋಡು ಜಿಲ್ಲಾ ಜತೆ ಕಾರ್ಯದರ್ಶಿ ಮನು ಎಲ್ಲೋರ ಹ್ಯಾಂಪರ್ ನೀಡಿ ಪ್ರೀತಿಯ ಗೌರವದೊಂದಿಗೆ ಸನ್ಮಾನಿಸಲಾಯಿತು. ಬಳಿಕ ನೈಹಳ ತಾಯಿ ಫಾತಿಮತ್ ಹಫ ಅಡ್ಕ ಅವರು ಮಗುವಿನ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು.

ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಮಾಡಲು ಈ ಪುಟ್ಟ ಮಗುವನ್ನು ಶಕ್ತಗೊಳಿಸಿ ಪ್ರೊತ್ಸಾಹಿಸಿದ ಪೋಷಕರು ಮತ್ತು ಕುಟುಂಬ ಸದಸ್ಯರನ್ನು ಈ ವೇದಿಕೆಯಲ್ಲಿ ವಿಶೇಷವಾಗಿ ಅಭಿನಂದಿಸಲಾಯಿತು.

ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಕೆ.ಪಿ.ಎ. ಕಾಸರಗೋಡು ವಲಯ ಉಪಾಧ್ಯಕ್ಷ ಸುಬ್ರಹ್ಮಣ್ಯ ವೀಡಿಯೋನಿಕ್ಸ್, ಯುನಿಟ್ ಪಿ.ಆರ್.ಒ ವಿನೋದ್, ಸಮಿತಿ ಸದಸ್ಯ ರತೀಶ್ ರಾಮು, ನೈಹಳ ಕುಟುಂಬ ಸದಸ್ಯರು ಭಾಗವಹಿಸಿದ್ದರು. ಯೂನಿಟ್ ಕಾರ್ಯದರ್ಶಿ ಶಾಲಿನಿ ರಾಜ್ ಸ್ವಾಗತಿಸಿ, ಮನು ಎಲ್ಲೋರ ಧನ್ಯವಾದ ನೀಡಿದರು.