ಒಂದೇ ದಿನದಲ್ಲಿ 50 ಹೊಸ ಮಳಿಗೆಗಳ ಆರಂಭ: ಕರ್ನಾಟಕದಲ್ಲಿ 200 ಫ್ರಾಂಚೈಸಿ ಮಳಿಗೆಗಳ ಮೈಲಿಗಲ್ಲು ತಲುಪಿದ ಬಿರ್ಲಾ ಓಪಸ್ ಪೇಂಟ್ಸ್

0
32

ಬೆಂಗಳೂರು: ಆದಿತ್ಯ ಬಿರ್ಲಾ ಸಮೂಹದ ಗ್ರಾಸಿಮ್ ಇಂಡಸ್ಟ್ರೀಸ್‌ನ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್, ಕರ್ನಾಟಕದಲ್ಲಿ ಒಂದೇ ದಿನದಲ್ಲಿ 50 ಹೊಸ ಫ್ರಾಂಚೈಸಿ ಮಳಿಗೆಗಳನ್ನು ಆರಂಭಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ವಿಸ್ತರಣೆಯೊಂದಿಗೆ ರಾಜ್ಯದಲ್ಲಿನ ಸಂಸ್ಥೆಯ ಒಟ್ಟು ಫ್ರಾಂಚೈಸಿ ಮಳಿಗೆಗಳ ಸಂಖ್ಯೆ 200ಕ್ಕೆ ಏರಿಕೆಯಾಗಿದೆ.

ನವೆಂಬರ್ 11ರಂದು ನಡೆದ ಈ ವಿಸ್ತರಣಾ ಕಾರ್ಯಕ್ರಮದ ಮೂಲಕ ರಾಜ್ಯದ ಪ್ರಮುಖ ನಗರಗಳು ಮತ್ತು ಮಾರುಕಟ್ಟೆಗಳಲ್ಲಿ ತನ್ನ ರಿಟೇಲ್ ಜಾಲವನ್ನು ಸಂಸ್ಥೆ ಬಲಪಡಿಸಿದೆ. ಹೊಸದಾಗಿ ಆರಂಭಿಸಲಾದ ಮಳಿಗೆಗಳು ಬೆಂಗಳೂರು, ಮೈಸೂರು, ತುಮಕೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಶಿವಮೊಗ್ಗ, ಹೊಸಪೇಟೆ, ವಿಜಯಪುರ, ದಾವಣಗೆರೆ ಮತ್ತು ಹಾಸನ ಸೇರಿದಂತೆ ವಿವಿಧ ನಗರಗಳಲ್ಲಿ ಗ್ರಾಹಕರಿಗೆ ಸೇವೆ ನೀಡಲಿವೆ.

ಬೆಂಗಳೂರು ನಗರವೊಂದರಲ್ಲೇ 11 ಹೊಸ ಮಳಿಗೆಗಳು ಆರಂಭವಾಗಿದ್ದು, ಒಟ್ಟು ಮಳಿಗೆಗಳ ಸಂಖ್ಯೆ 57ಕ್ಕೆ ತಲುಪಲಿದೆ. ತುಮಕೂರಿನಲ್ಲಿ 7, ಮೈಸೂರು ಮತ್ತು ಹೊಸಪೇಟೆಯಲ್ಲಿ ತಲಾ 5 ಹೊಸ ಮಳಿಗೆಗಳನ್ನು ಪ್ರಾರಂಭಿಸಲಾಗಿದೆ. ಮಂಗಳೂರು ಹಾಗೂ ಇತರ ಪ್ರಮುಖ ನಗರಗಳಲ್ಲಿಯೂ ಹೊಸ ಮಳಿಗೆಗಳನ್ನು ತೆರೆಯಲಾಗಿದೆ.

ಈ ಕುರಿತು ಮಾತನಾಡಿದ ಬಿರ್ಲಾ ಓಪಸ್ ಪೇಂಟ್ಸ್ ಮಾರಾಟ ವಿಭಾಗದ ಮುಖ್ಯಸ್ಥ ಆಶಿಷ್ ಜಜೂ, ಕರ್ನಾಟಕದಲ್ಲಿ 200 ಫ್ರಾಂಚೈಸಿ ಮಳಿಗೆಗಳ ಮೈಲಿಗಲ್ಲು ಸಾಧಿಸಿರುವುದು ಸಂಸ್ಥೆಯ ವಿತರಣಾ ಜಾಲದ ಬೆಳವಣಿಗೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ. ದೇಶಾದ್ಯಂತ ಸಂಸ್ಥೆಯ ಫ್ರಾಂಚೈಸಿ ಮಳಿಗೆಗಳ ಸಂಖ್ಯೆ 2,000ಕ್ಕೂ ಅಧಿಕವಾಗಿದ್ದು, ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವುದು ಮತ್ತು ಗ್ರಾಹಕರಿಗೆ ಉತ್ಪನ್ನಗಳನ್ನು ಸುಲಭವಾಗಿ ತಲುಪಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಮಹಾದೇವ್ ಹಾರ್ಡ್‌ವೇರ್‌ನ ಸೋಹನ್‌ಲಾಲ್ ಮಾತನಾಡಿ, ಬಿರ್ಲಾ ಓಪಸ್ ಪೇಂಟ್ಸ್‌ನೊಂದಿಗೆ ಹೊಂದಿರುವ ಪಾಲುದಾರಿಕೆಯು ಗ್ರಾಹಕರಿಗೆ ಆಧುನಿಕ ಪೇಂಟಿಂಗ್ ಪರಿಹಾರಗಳು ಹಾಗೂ ವಿವಿಧ ಉತ್ಪನ್ನಗಳನ್ನು ಒದಗಿಸಲು ಉತ್ತಮ ಅವಕಾಶ ಕಲ್ಪಿಸಿದೆ. ಸಂಸ್ಥೆಯ ಬೆಳವಣಿಗೆಯೊಂದಿಗೆ ತಮ್ಮ ವ್ಯಾಪಾರವನ್ನೂ ಮತ್ತಷ್ಟು ವಿಸ್ತರಿಸುವ ನಿರೀಕ್ಷೆಯಿದೆ ಎಂದರು.

ಹೊಸದಾಗಿ ಆರಂಭಗೊಂಡಿರುವ ಮಳಿಗೆಗಳಲ್ಲಿ ಗ್ರಾಹಕರಿಗೆ ಒಳಾಂಗಣ ಮತ್ತು ಹೊರಾಂಗಣ ಪೇಂಟ್‌ಗಳು, ವಾಟರ್‌ಪ್ರೂಫಿಂಗ್ ಉತ್ಪನ್ನಗಳು, ಎನಾಮೆಲ್ ಪೇಂಟ್‌ಗಳು, ವುಡ್ ಫಿನಿಶ್‌ಗಳು, ವಾಲ್‌ಪೇಪರ್‌ಗಳು ಸೇರಿದಂತೆ ವಿವಿಧ ಅಲಂಕಾರಿಕ ಪೇಂಟಿಂಗ್ ಉತ್ಪನ್ನಗಳು ಲಭ್ಯವಾಗಲಿವೆ. ಮನೆ ಮತ್ತು ವಾಣಿಜ್ಯ ಕಟ್ಟಡಗಳಿಗೆ ಸೂಕ್ತವಾದ ಬಣ್ಣಗಳ ಆಯ್ಕೆ, ಪರಿಣಿತ ಸಲಹೆ ಹಾಗೂ ವೈಯಕ್ತಿಕಗೊಳಿಸಿದ ಮಾರ್ಗದರ್ಶನವನ್ನೂ ಮಳಿಗೆಗಳಲ್ಲಿ ಒದಗಿಸಲಾಗುತ್ತದೆ.

2024ರಲ್ಲಿ ಆರಂಭಗೊಂಡಿರುವ ಬಿರ್ಲಾ ಓಪಸ್ ಪೇಂಟ್ಸ್, ಭಾರತದಾದ್ಯಂತ ಆರು ಅತ್ಯಾಧುನಿಕ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ಅಲಂಕಾರಿಕ ಪೇಂಟ್‌ಗಳ ವಿವಿಧ ವಿಭಾಗಗಳಲ್ಲಿ ತನ್ನ ಉತ್ಪನ್ನಗಳ ಶ್ರೇಣಿಯನ್ನು ವಿಸ್ತರಿಸುತ್ತಿದೆ. ಕರ್ನಾಟಕದಲ್ಲಿ 200 ಮಳಿಗೆಗಳ ಮೈಲಿಗಲ್ಲು ಸಾಧಿಸಿರುವುದು ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ತನ್ನ ವ್ಯಾಪಾರ ಮತ್ತು ಗ್ರಾಹಕ ಸಂಪರ್ಕವನ್ನು ಬಲಪಡಿಸುವ ಸಂಸ್ಥೆಯ ಪ್ರಯತ್ನದ ಭಾಗವಾಗಿದೆ.

ಹೆಚ್ಚಿನ ಮಾಹಿತಿಗಾಗಿ: www.birlaopus.com