ಬೆಳ್ತಂಗಡಿ : ಮಲವಂತಿಗೆ ಗ್ರಾಮದ ಬಾಳೆಹಿತ್ತಿಲು ಎಂಬಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಬಾಳೆಹಿತ್ತಿಲು ನಿವಾಸಿ ಪುನೀತ್ ಅಲಿಯಾಸ್ ಪುರುಷೋತ್ತಮ್ ಗೌಡ (ಯುವಕ) ಮೃತಪಟ್ಟವರು.
ಇವರು ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಬೆಳ್ತಂಗಡಿ ಶಾಖೆಯಲ್ಲಿ ಪಿಗ್ಮಿ ಸಂಗ್ರಹಕಾರರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಕೆಲಸದ ನಿಮಿತ್ತ ರಜೆ ಪಡೆದಿದ್ದ ಪುನೀತ್, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಹೋದರರು ಹಾಗೂ ಸಂಬಂಧಿಕರೊಂದಿಗೆ ಸಂತೋಷದಿಂದ ಕಾಲ ಕಳೆದಿದ್ದರು ಎನ್ನಲಾಗಿದೆ. ಆದರೆ, ಬುಧವಾರ ರಾತ್ರಿ ಸುಮಾರು 9.30ರ ವೇಳೆಗೆ ಮನೆಯ ಸಮೀಪದ ತೋಟಕ್ಕೆ ತೆರಳಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಯುವಕನ ಈ ದುರಂತ ನಿರ್ಧಾರಕ್ಕೆ ನಿಖರ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

