ಒಂಬತ್ತನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಖುಷಿಯಲ್ಲಿ ಉದ್ಯಮಿಯೊಬ್ಬರು ತಮ್ಮ 15 ವರ್ಷದ ಮಗನಿಗೆ ಬರೋಬ್ಬರಿ ₹2.30 ಕೋಟಿ ಮೌಲ್ಯದ ಐಷಾರಾಮಿ BMW M4 Competition ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ದುಬಾರಿ ಉಡುಗೊರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟಣೆಯು ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದೆ.
ಪುರ್ಬಾ ಬರ್ಧಮಾನ್ ಜಿಲ್ಲೆಯ ಅಕ್ಕಿ ಉದ್ಯಮಿ ಶಂಸುದ್ದೀನ್ ಮಿದ್ಯಾ ಅವರು ತಮ್ಮ ಪುತ್ರ ಮೊಹಮ್ಮದ್ ತಲ್ಯಾಗೆ ಈ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಒಂದು ಕಾಲದಲ್ಲಿ ಮುಂಬೈನಲ್ಲಿ ಸಾಮಾನ್ಯ ಲೈಟ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಶಂಸುದ್ದೀನ್, ಸತತ ಪರಿಶ್ರಮದಿಂದ ಯಶಸ್ವಿ ಉದ್ಯಮಿಯಾಗಿ ಬೆಳೆದಿದ್ದಾರೆ.
ಮಗ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ BMW ಕಾರು ಕೊಡಿಸುವುದಾಗಿ ತಂದೆ ಭರವಸೆ ನೀಡಿದ್ದರು. ಅದರಂತೆ ಮುಂಬೈನ ಅಂಧೇರಿಯ ಶೋರೂಮ್‌ನಿಂದ ಕಾರನ್ನು ಖರೀದಿಸಿ, ಕಂಟೇನರ್ ಮೂಲಕ ತಮ್ಮ ಸ್ವಗ್ರಾಮಕ್ಕೆ ತರಿಸಿದ್ದಾರೆ.
ಆದರೆ, ಮಗನಿಗೆ ಇನ್ನೂ 18 ವರ್ಷ ತುಂಬದ ಕಾರಣ ಸದ್ಯಕ್ಕೆ ಕಾರು ಚಾಲನೆ ಮಾಡಲು ಕಾನೂನುಬದ್ಧ ಅನುಮತಿ ಇಲ್ಲ. ತಂದೆಯ ಈ ದುಬಾರಿ ಉಡುಗೊರೆಯನ್ನು ಕೆಲವರು ಮಗನ ಸಾಧನೆಗೆ ನೀಡಿದ ಪ್ರೋತ್ಸಾಹ ಎಂದು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಇಷ್ಟೊಂದು ದುಬಾರಿ ಕಾರು ನೀಡಿರುವುದನ್ನು ಪ್ರಶ್ನಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿದೆ.

