ಮೂಡುಬಿದಿರೆ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರ್ಕಾರ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡುಬಿದಿರೆ ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆ ಜ್ಯೋತಿನಗರ, ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯು ನವೆಂಬರ್ 12, ಗುರುವಾರದಂದು ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
“ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ” ಎಂಬ ಧ್ಯೇಯವಾಕ್ಯದೊಂದಿಗೆ ವಿಜ್ಞಾನದ ಆರು ಶೀರ್ಷಿಕೆಯಡಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ತಮ್ಮ ಮಾರ್ಗದರ್ಶಕ ಶಿಕ್ಷಕರೊಂದಿಗೆ ತಾಲೂಕಿನ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ, ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಪ್ರೌಢಶಾಲೆ ಹೊಸಬೆಟ್ಟು, ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ ಕಲ್ಲಬೆಟ್ಟು , ಕೆಪಿಎಸ್ ಮಿಜಾರು, ಮರಿಯಂ ನಿಕೇತನ ಬೆಳುವಾಯಿ ಹಾಗೂ ರೋಟರಿ ಆಂಗ್ಲ ಮಾಧ್ಯಮ ಪ್ರೌಡಶಾಲೆಯ ವಿದ್ಯಾರ್ಥಿಗಳು , ಗುಂಪು ಮತ್ತು ವೈಯಕ್ತಿಕ ವಿಭಾಗಗಳಲ್ಲಿ ಭಾಗವಹಿಸಿದರು. ಪರಿಸರ ಸಂರಕ್ಷಣೆ, ನವೀಕರಿಸಬಹುದಾದ ಇಂಧನ, ರೊಬೊಟಿಕ್ಸ್ ಹಾಗೂ ದೈನಂದಿನ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಸೂಚಿಸುವ ಹಲವಾರು ಆಕರ್ಷಕ ಮಾದರಿಗಳನ್ನು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪ್ರದರ್ಶಿಸಿದರು.
ರೋಟರಿ ವಿದ್ಯಾಸಂಸ್ಥೆಗಳ ಖಜಾಂಚಿ ರೋ ನಾಗರಾಜ್ ಬಿ ಅವರು ಡಿಜಿಟಲ್ ದೀಪ ಉರಿಸುವ ಮೂಲಕ ಸ್ಪರ್ಧೆಯನ್ನು ಉದ್ಘಾಟಿಸಿ , ವೇಗವಾಗಿ ಬೆಳೆಯುತ್ತಿರುವ ಬದಲಾವಣೆಗಳಲ್ಲಿ ವಿಜ್ಞಾನದ ಪಾತ್ರವನ್ನು ಮಕ್ಕಳಿಗೆ ತಿಳಿ ಹೇಳಿ ವಿಜ್ಞಾನದಲ್ಲಿ ಆಸಕ್ತಿ ಮತ್ತು ಅಭಿರುಚಿ ಬೆಳೆಸಿಕೊಳ್ಳುವ ಅಗತ್ಯತೆಯ ಬಗ್ಗೆ ಮಾತನಾಡಿ ಸ್ಪರ್ದಾರ್ಥಿಗಳಿಗೆ ಶುಭ ಹಾರೈಸಿದರು
ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಕಳ ತಾಲೂಕು ಬೈಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಶಿಕ್ಷಕರಾದ ಶರೀಫ್, ಅಂಗರಗುಂಡಿ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಸುಬ್ರಹ್ಮಣ್ಯ ಹಾಗೂ ಜೈನ್ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಹರೀಶ್ ಆಚಾರ್ ಅವರು ವಿದ್ಯಾರ್ಥಿಗಳ ಮಾದರಿಗಳನ್ನು ಮೌಲ್ಯಮಾಪನ ಮಾಡಿ , ವಿದ್ಯಾರ್ಥಿಗಳ ವೈಜ್ಞಾನಿಕ ಮನೋಭಾವ ಮತ್ತು ಸೃಜನಶೀಲತೆಯನ್ನು ಶ್ಲಾಘಿಸಿದರು.
ಕ್ಷೇತ್ರಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಮತ್ತು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರಿತೇಶ್ ಶೆಟ್ಟಿ ಈ ಸಂಧರ್ಭದಲ್ಲಿ ಸಂಸ್ಥೆಗೆ ಬೇಟಿ ನೀಡಿ , ವಿಧ್ಯಾರ್ಥಿಗಳ ಮಾದರಿಗಳನ್ನು ವೀಕ್ಷಿಸಿ ಸ್ಪರ್ಧಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಸ್ಪರ್ಧೆಯ ವಿಜೇತರ ಪಟ್ಟಿ ಕೆಳಗಿಂನಂತಿವೆ
ವೈಯಕ್ತಿಕ ವಿಭಾಗ:
- ಪ್ರಥಮ ಸ್ಥಾನ: ನಿಹಾನ್ (ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ)
- ದ್ವಿತೀಯ ಸ್ಥಾನ: ಇಫ್ರಾ ಫಾತಿಮಾ (ರೋಟರಿ ಆಂಗ್ಲ ಮಾಧ್ಯಮ ಶಾಲೆ)
- ತೃತೀಯ ಸ್ಥಾನ: ಮುಸ್ಕಾನ್ ಹಾಜಿಮಲಂಗ್ ಡಾಂಗೆ (ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ)
ಗುಂಪು ವಿಭಾಗ:
- ಪ್ರಥಮ ಸ್ಥಾನ: ತೃಪ್ತಿ ಪೂಜಾರಿ ಮತ್ತು ತನ್ವಿ ಪೂಜಾರಿ (ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆ)
- ದ್ವಿತೀಯ ಸ್ಥಾನ: ಸಮೀಕ್ಷಾ ಮತ್ತು ಶಾನ್ವಿ (ಸರ್ಕಾರಿ ಪ್ರೌಢಶಾಲೆ, ಹೊಸಬೆಟ್ಟು)
- ತೃತೀಯ ಸ್ಥಾನ: ವೈಭವ್ ಪಿ. ಅಮೀನ್ ಮತ್ತು ವಿಯಾನ್ ಪೆರಿಸ್ (ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ)
ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ದಾರ್ಥಿಗಳಿಗೆ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಸಂಸ್ಥೆಯ ಎಲ್ಲಾ ವಿಜ್ಞಾನ ಶಿಕ್ಷಕರು ಕಾರ್ಯಕ್ರಮ ಸಂಯೋಜನೆ ಮತ್ತು ನಿರ್ವಹಣೆ ಯಲ್ಲಿ ಸಹಕರಿಸಿದರು. ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ತಿಲಕಾ ಅನಂತವೀರ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕಿಯರಾದ ದೀಪಿಕಾ ವಿದ್ಯಾರ್ಥಿಗಳ ಪ್ರಶಸ್ತಿಪತ್ರ ವಾಚಿಸಿ, ರೇಖಾ ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿ ನಾರಾಯಣಿ ಭಟ್ ವಂದಿಸಿದರು.

