ಪ್ರೇರಣಾ ಶಾಲೆಯಲ್ಲಿ ವಿಶಿಷ್ಟ ರೀತಿಯಲ್ಲಿ ದೀಪಾವಳಿ ಹಬ್ಬದ ಆಚರಣೆ

0
6

ಮೂಡುಬಿದಿರೆ ಕಡಲಕೆರೆಯ ಪ್ರೇರಣಾ ಶಾಲೆಯಲ್ಲಿ ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು . ವೇದಿಕೆಯಲ್ಲಿ ದೇವರ ಫೋಟೋ ಎದುರಿನಲ್ಲಿ ಆಕರ್ಷಕ ರೀತಿಯಲ್ಲಿ ಹೂಗಳಿಂದಲೇ ರಂಗವಲ್ಲಿ ಬಿಡಿಸಿ ಶಾಲೆಯ ಎಲ್ಲಾ 325 ವಿದ್ಯಾರ್ಥಿಗಳೂ ಪ್ರತ್ಯೇಕ ಪ್ರತ್ಯೇಕವಾಗಿ ಹಣತೆಯನ್ನು ಹಚ್ಚಿ ರಂಗವಲ್ಲಿಯ ಸುತ್ತಲೂ ಇಟ್ಟು ದೇವರಿಗೆ ನಮಿಸಿದಾಗ ಇಡೀ ಸಭಾಭವನದಲ್ಲಿ ಹಬ್ಬದ ವಾತಾವರಣ ಮೂಡಿತು . ವಿದ್ಯಾರ್ಥಿಗಳು ಉತ್ಸಾಹದಿಂದ ದೇವರ ಭಜನೆ ಹಾಡುತ್ತಾ ಸಂಭ್ರಮಿಸಿದರು.
ಮೂಡುಬಿದಿರೆ ಇ‌.ಜಿ.ಸೋನ್ಸ್ ಐಟಿಐ ಕಾಲೇಜಿನ ನಿವೃತ್ತ ಉದ್ಯೋಗಿ ಶ್ರೀ ಶ್ರೀನಿವಾಸ ಕಿಣಿಯವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟಿಸುತ್ತಾ ,

” ಪ್ರೇರಣಾ ಶಾಲೆಯಲ್ಲಿ ವಿವಿಧ ಹಬ್ಬಗಳ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸುವುದರ ಮೂಲಕ ಗಮನ ಸೆಳೆಯುತ್ತಿದೆ . ಪ್ರೇರಣಾ ಶಾಲೆಯಲ್ಲಿ ವಿದ್ಯಾರ್ಥಿಗಳ ಶಿಸ್ತು , ನಡವಳಿಕೆ , ವಿದ್ಯಾರ್ಥಿಗಳು ಶಾಲೆಯ ಮೇಲೆ ಇಟ್ಟಿರುವ ಅಭಿಮಾನ , ಪ್ರೀತಿ ಅನುಕರಣೀಯ . ದೀಪಾವಳಿ ಹಬ್ಬವನ್ನು ವಿಶಿಷ್ಟವಾಗಿ ಹೇಗೆ ಆಚರಿಸಬಹುದು ಎಂಬ ಪರಿಕಲ್ಪನೆ ಗಮನಾರ್ಹ .ಎಲ್ಲಾ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ ” ಎಂದು ನುಡಿದರು .
ಅಧ್ಯಕ್ಷೀಯ ಭಾಷಣ ಮಾಡುತ್ತಾ , ಶಾಲಾ ಸಂಚಾಲಕರಾದ ಎಂ.ಶಾಂತರಾಮ ಕುಡ್ವರು , ” ಸಾಲಾಗಿ ದೀಪ ಹಚ್ಚಿ ಆಚರಿಸುವ ಹಬ್ಬವೇ ದೀಪಾವಳಿ . ಆಶ್ವೀಜ ಮಾಸದ ಕೊನೆ ಹಾಗೂ ಕಾರ್ತೀಕ ಮಾಸದ ಪ್ರಾರಂಭದಲ್ಲಿ ಬರುವ ಐದು ದಿನಗಳ ದೀಪಾವಳಿ ಹಬ್ಬವು ಎಲ್ಲರಿಗೂ ಸಂಭ್ರಮವನ್ನು ತರುವಂತಹುದು .
ತ್ರೇತಾಯುಗದಲ್ಲಿ ಪ್ರಭು ಶ್ರೀರಾಮಚಂದ್ರನು , ವನವಾಸ ಪೂರೈಸಿ ಮರಳಿ ಕಾರ್ತೀಕ ಮಾಸದ ಅಮವಾಸ್ಯೆಯಂದು ಅಯೋಧ್ಯೆಗೆ ಬರುವ ಸಂದರ್ಭದಲ್ಲಿ ಅಲ್ಲಿಯ ಪ್ರಜೆಗಳು ಇಡೀ ಅಯೋಧ್ಯೆಯಲ್ಲಿ ತುಪ್ಪದಲ್ಲಿ ದೀಪ ಉರಿಸಿ , ದೀಪಾವಳಿ ಆಚರಿಸಿ ಸಂಭ್ರಮಿಸಿದುದು ರಾಮಾಯಣದಲ್ಲಿ ಉಲ್ಲೇಖವಿದೆ . ದ್ವಾಪರಾ ಯುಗದಲ್ಲಿ ಆಶ್ವೀಜ ಮಾಸದ ಚತುರ್ದಶಿಯಂದು ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ಅವನ ಸ್ಮರಣೆಗಾಗಿ ಪ್ರಜೆಗಳು ಆ ದಿನವನ್ನು ನರಕ ಚತುರ್ದಶಿ ಎಂದು ಆಚರಿಸುವ ಪರಂಪರೆ ಹುಟ್ಟಿತು . ಕೃತಯುಗದಲ್ಲಿ ಶ್ರೀಮನ್ನಾರಾಯಣನು ಬಲಿ ಚಕ್ರವರ್ತಿಯನ್ನು ವಾಮನ ರೂಪದಿಂದ ವಿಶ್ವಾಕಾರ ತಾಳಿ ಪಾತಾಳಕ್ಕೆ ತಳ್ಳಿದಾಗ , ಬಲಿಯ ಕೋರಿಕೆಯಂತೆ ವರ್ಷಕ್ಕೊಮ್ಮೆ ಕಾರ್ತಿಕ ಮಾಸದ ಪಾಡ್ಯದಂದು ಭೂಲೋಕಕ್ಕೆ ಬರುವಂತೆ ಅನುಗ್ರಹಿಸಿದನು . ಆ ದಿನವನ್ನು ಬಲಿ ಪಾಡ್ಯಮಿ ಎಂದು ಇಂದಿಗೂ ಆಚರಿಸುವ ಪರಂಪರೆ ಬೆಳೆದು ಬಂದಿದೆ . ” ಎಂದು ನುಡಿದರು . ಪ್ರೇರಣಾ ಶಾಲೆಯ ಟ್ರಸ್ಟಿ ಡಾ. ಆನಂದ ಕಾರ್ಲರು ಉಪಸ್ಥಿತರಿದ್ದರು.
ಪ್ರೇರಣಾ ಶಾಲೆಯ ಮುಖ್ಯೋಪಧ್ಯಾಯಿನಿ ಶ್ರೀಮತಿ ವತ್ಸಲಾ ರಾಜೇಶ್ ರವರು ನಿರೂಪಣೆ ಮಾಡಿ ಅತಿಥಿಗಳನ್ನು ಸ್ವಾಗತಿಸಿದರು . ಶಾಲೆಯ ವಿದ್ಯಾರ್ಥಿಗಳೇ ಸ್ವತಃ ರಚಿಸಿದ ಸುಂದರವಾದ ನೂರಾರು ಗೂಡುದೀಪಗಳು ಗಮನ ಸೆಳೆಯಿತು . ಶಾಲೆಯ ಎಲ್ಲಾ ಶಿಕ್ಷಕ , ಶಿಕ್ಷಕಿ ಹಾಗೂ ವಿದ್ಯಾರ್ಥಿಗಳು ಹೂಗಳಿಂದ ವೇದಿಕೆಯನ್ನು ಅಲಂಕರಿಸಿ ಸಹಕರಿಸಿದರು.