ಮಹಾಭಾರತ ಭಾವದೀಪ ಉಪನ್ಯಾಸ ಮಾಲೆಯ ಏಕಾದಶ ಸೋಪಾನ – ‘ಯುದ್ಧ, ಸ್ತ್ರೀ, ಶಾಂತಿ ಪರ್ವಗಳ’ ಕುರಿತು ಉಪನ್ಯಾಸ
ಮಹಾಭಾರತವು ಲೋಕಹಿತ, ಧರ್ಮ ಮತ್ತು ಶಾಂತಿಯ ಮಹತ್ವವನ್ನು ಸಾರುವ ಮಹಾನ್ ಗ್ರಂಥವಾಗಿದೆ. ಲೋಕಹಿತವನ್ನು ಬಯಸುವ ಕಾರ್ಯಗಳೆಲ್ಲವೂ ಧರ್ಮವೇ ಆಗಿದೆ ಎಂದು ಭಗವಾನ್ ಶ್ರೀಕೃಷ್ಣ ಸಾರಿದ್ದಾನೆ ಎಂದು ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆ ತಿಳಿಸಿದರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕದ ಸಹಭಾಗಿತ್ವದಲ್ಲಿ 2026ರ ವರ್ಷಪೂರ್ತಿ ಪ್ರತಿತಿಂಗಳು ನಡೆಯುತ್ತಿರುವ ‘ಮಹಾಭಾರತ ಭಾವದೀಪ’ ಉಪನ್ಯಾಸ ಮಾಲೆಯ ಏಕಾದಶ ಸೋಪಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವೆಂಬರ್ 14ರಂದು ಕಾರ್ಕಳದ ಪ್ರಕಾಶ್ ಹೋಟೆಲ್ನ ‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಯುದ್ಧ, ಸ್ತ್ರೀ, ಶಾಂತಿ ಪರ್ವಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಹಸ್ತಿನಾಪುರದಲ್ಲಿ ಅಶಾಂತಿಯನ್ನು ಸೃಷ್ಟಿಸಿದ ಕೌರವರ ನಾಶದ ಬಳಿಕವೇ ಶಾಂತಿ ನೆಲೆಗೊಳ್ಳಲು ಪ್ರಾರಂಭವಾಯಿತು. ರಾಜಧರ್ಮ, ಆಪದ್ಧರ್ಮ ಮತ್ತು ಮೋಕ್ಷಧರ್ಮವನ್ನು ವಿವರಿಸಿದ ಕೃಷ್ಣ, ಲೋಕಕಲ್ಯಾಣವನ್ನು ಬಯಸುವ ಕಾರ್ಯಗಳೇ ನಿಜವಾದ ಧರ್ಮ ಎಂಬ ಸಂದೇಶ ನೀಡಿದ್ದಾನೆ. ದೇವರ ಕೃಪೆಗೆ ಪಾತ್ರರಾದರೆ ನಾವು ಕೇಳದಿದ್ದರೂ ಆತ ನಮ್ಮ ರಕ್ಷಣೆಗೆ ನಿಲ್ಲುತ್ತಾನೆ ಎಂಬ ಸಂದೇಶವನ್ನೂ ಮಹಾಭಾರತ ನೀಡುತ್ತದೆ ಎಂದರು.
ಮಹಾಭಾರತ ಎಂದರೆ ಕೇವಲ ಯುದ್ಧದ ಕಥೆಯಲ್ಲ, ಅದು ಶಾಂತಿಯನ್ನು ಬಯಸುವ ಮಾರ್ಗವನ್ನೂ ತೋರಿಸುತ್ತದೆ. ಯುದ್ಧ ನಿಂತ ತಕ್ಷಣವೇ ಶಾಂತಿ ಲಭಿಸುವುದಿಲ್ಲ. ಜಯ-ಅಪಜಯಗಳನ್ನು ಮೀರಿ, ಷಡ್ವೈರಿಗಳನ್ನು ಮಣಿಸಿ ಮನಸ್ಸನ್ನು ಶಾಂತಗೊಳಿಸಿ ಪಾರಮಾರ್ಥಿಕ ಸುಖವನ್ನು ಅನುಭವಿಸುವುದರಲ್ಲಿಯೇ ನಿಜವಾದ ಶಾಂತಿ ಅಡಗಿದೆ ಎಂದು ಅವರು ವಿವರಿಸಿದರು.
ಬಿ.ಆರ್. ವೆಂಕಟ್ರಮಣ ಐತಾಳ್ ಅವರಿಗೆ ರಂಗಸನ್ಮಾನ್ ಪ್ರಶಸ್ತಿ
ಇದೇ ಸಂದರ್ಭದಲ್ಲಿ ಕಾಂತಾವರ ಕನ್ನಡ ಸಂಘದ ‘ಮಂಜನ ಬೈಲ್ ರಂಗಸನ್ಮಾನ್’ ದತ್ತಿನಿಧಿ ಪ್ರಶಸ್ತಿಯನ್ನು ಕರಾವಳಿ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟ್ರಮಣ ಐತಾಳ್ ಅವರಿಗೆ ಪ್ರದಾನ ಮಾಡಲಾಯಿತು. ಹಾರ, ಶಾಲು, ತಾಮ್ರಪತ್ರ, ಸ್ಮರಣಿಕೆ ಹಾಗೂ 10 ಸಾವಿರ ರೂಪಾಯಿ ನಗದು ಒಳಗೊಂಡ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ನಿಧನರಾದ ಶ್ರೀ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತ್ಯ-ಸಾಂಸ್ಕೃತಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಡಾ. ಬಿ. ಪದ್ಮನಾಭ ಗೌಡ ಅವರಿಗೆ ನಿತ್ಯಾನಂದ ಪೈ ಅವರು ನುಡಿನಮನ ಸಲ್ಲಿಸಿದರು. ಬಳಿಕ ಮೌನ ಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ಹಾಗೂ ಏರ್ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕು. ಶಾರ್ವರಿ ಶ್ಯಾನುಭೋಗ್ ಪ್ರಾರ್ಥಿಸಿದರು. ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಜಗದೀಶ್ ಗೋಖಲೆ ವಂದಿಸಿದರು.

