ಯಕ್ಷಾಂಗಣ ಸಪ್ತಾಹದ ಕರೆಯೋಲೆ ಬಿಡುಗಡೆ

0
9

ತಾಳಮದ್ದಳೆ ಜ್ಞಾನಸತ್ರ ನಿರಂತರವಾಗಲಿ: ಡಾ|ಎ.ಸದಾನಂದ ಶೆಟ್ಟಿ

ಮಂಗಳೂರು : ‘ಯಕ್ಷಗಾನ ತಾಳಮದ್ದಳೆ ಕೇವಲ ಮನರಂಜನೆಯಲ್ಲ; ಅದೊಂದು ಜ್ಞಾನಸತ್ರ. ಪುರಾಣದ ಮೌಲ್ಯಗಳನ್ನು ಜನಮಾನಸಕ್ಕೆ ಮುಟ್ಟಿಸಿ ಚಿಂತನೆಗೆ ಹಚ್ಚುವ ಕಲಾ ಪ್ರಕಾರ. ಕಳೆದ 13 ವರ್ಷಗಳಿಂದ ಯಕ್ಷಾಂಗಣ ಸಂಸ್ಥೆ ತಾಳಮದ್ದಳೆ ಸಪ್ತಾಹ ನಡೆಸುವ ಮೂಲಕ ಮಂಗಳೂರಿನಲ್ಲಿ ಸಾಂಸ್ಕೃತಿಕ ಜಾಗೃತಿ ಮೂಡಿಸಿದೆ. ಈ ಜ್ಞಾನಸತ್ರ ನಿರಂತರವಾಗಿ ನಡೆಯಲಿ’ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮತ್ತು ಹಿರಿಯ ಉದ್ಯಮಿ ಡಾ| ಎ. ಸದಾನಂದ ಶೆಟ್ಟಿ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದಲ್ಲಿ 2026 ನವೆಂಬರ್ 22 ರಿಂದ 28ರ ವರೆಗೆ ನಡೆಯುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ 14ನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2026’ ಸಂಘಟನಾ ಪರ್ವ- ಚತುರ್ದಶ ಸರಣಿಯ ಕರೆಯೋಲೆ ಬಿಡುಗಡೆಗೊಳಿಸಿ ಅವರು ಶುಭ ಹಾರೈಸಿದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ ಸಪ್ತಾಹದ ವಿವಿಧ ದಿನ ನಡೆಯುವ ಕಾರ್ಯಕ್ರಮಗಳ ರೂಪುರೇಷೆಗಳನ್ನು ತಿಳಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ವಂದಿಸಿದರು. ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಪ್ರಧಾನ ಸಂಚಾಲಕ ರವೀಂದ್ರ ರೈ ಕಲ್ಲಿಮಾರು ಮತ್ತು ಕಾರ್ಯದರ್ಶಿ ಲಕ್ಷ್ಮೀನಾರಾಯಣ ರೈ ಹರೇಕಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.