ತಮ್ಮ ಬದುಕನ್ನೇ ಯಕ್ಷಗಾನಕ್ಕೆ ಮುಡಿಪಾಗಿಟ್ಟು ಕಲಾರಸಿಕರನ್ನು ರಂಜಿಸಿ ಯಕ್ಷಗಾನವನ್ನು ಬೆಳೆಸಿದ ಕಲಾವಿದರ ದುಡಿಮೆ ತಪಸ್ಸಿಗೆ ಸಮಾನ. ಯಕ್ಷಗಾನ ಕಲಾರಂಗವು ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡುವಲ್ಲಿ ಎಲ್ಲಾ ಸಂಸ್ಥೆಗಳಿಗೆ ಮಾದರಿಯಾಗಿದೆ.
ಕಲಾರಂಗ ಉಡುಪಿಯ ಕೀರ್ತಿಯ ಕಿರೀಟಕ್ಕೆ ಹೆಮ್ಮೆಯ ತುರಾಯಿ. ಅವರ ಪ್ರಾಮಾಣಿಕತೆ ಮತ್ತು ಸಮಾಜಮುಖಿ ಕಾರ್ಯಗಳಿಂದ ದಾನಿಗಳು ಹುಡುಕಿಕೊಂಡು ಬರುತ್ತಿದ್ದಾರೆ. ಸಂಸ್ಥೆಗೂ, ಪ್ರಶಸ್ತಿ ಸ್ವೀಕರಿಸಿದ ಎಲ್ಲಾ ಕಲಾವಿದರಿಗೂ ಒಳ್ಳೆಯದಾಗಲಿ ಎಂದು ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನವೆಂಬರ್ 15 ರಂದು ಯಕ್ಷಗಾನ ಕಲಾರಂಗದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಡಾ. ಟಿ. ಶ್ಯಾಮ ಭಟ್ ಮಾತನಾಡಿ ಕಲಾರಂಗ ಯಕ್ಷಗಾನ ಕಲೆ-ಕಲಾವಿದರ ಕ್ಷೇಮ ಚಿಂತನೆಗಿರುವ ಶ್ರೇಷ್ಠ ಸಂಘಟನೆ. ಎಲ್ಲಾ ಕಲಾವಿದರು ಈ ಸಂಸ್ಥೆಗೆ ಕೃತಜ್ಞರಾಗಿರಬೇಕು. ಸಭಾ ಕಾರ್ಯಕ್ರಮ ಹೇಗಿರಬೇಕು ಎಂಬುದನ್ನು ಇವರನ್ನು ನೋಡಿ ಕಲಿಯಬೇಕು ಎಂದರು. ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಅವರು ಯಕ್ಷಗಾನ ಕಲಾವಿದರ ಮಕ್ಕಳಿಗೆ ನೀಡುವ ಯಕ್ಷವಿದ್ಯಾಪೋಷಕ್ ಸಹಾಯಧನವನ್ನು ಕಲಾವಿದರ 74 ಮಕ್ಕಳಿಗೆ 8,34,500/- ರೂಪಾಯಿಯನ್ನು ಸಾಂಕೇತಿಕವಾಗಿ ವಿತರಿಸಿ ಯಕ್ಷಶಿಕ್ಷಣ ಟ್ರಸ್ಟ್ ಯಶಸ್ಸಿನಲ್ಲಿ ಕಲಾರಂಗದ ನಾಯಕತ್ವ, ಕಾರ್ಯಕರ್ತರ ಪರಿಶ್ರಮ ಮಹತ್ವದ ಪಾತ್ರ ವಹಿಸಿದೆ. ನಾಳೆಯಿಂದ ಡಿಸೆಂಬರ್ 28 ರವರೆಗೆ 99 ಶಾಲೆಗಳ ಪ್ರದರ್ಶನ ನಡೆಯಲಿದೆ ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಇತ್ತೀಚಿಗೆ ನಿಧನರಾದ ಮುಡಾರೆ ಸೀತಾರಾಮ ಹೆಗಡೆ, ಥಂಡಿಮನೆ ಶ್ರೀಪಾದ ಭಟ್, ಬೀಜೂರು ಚಂದ್ರರಶೇಖರ ಶೆಟ್ಟಿ ಇವರುಗಳ ಕುಟುಂಬಕ್ಕೆ ತಲಾ 30,000/- ರೂಪಾಯಿ ಸಾಂತ್ವನ ನಿಧಿಯನ್ನು ವಿತರಿಸಿದರು. ಟೆಕ್ಸೆಲ್ ಪ್ರೈ.ಲಿ.ನ ಎಂ.ಡಿ ಶ್ರೀ ಹರೀಶ್ ರಾಯಸರು ಮಾತನಾಡಿ ಕಲಾರಂಗದ ಕಾರ್ಯಕ್ರಮಕ್ಕೆ ಬಂದಾಗಲೆಲ್ಲ ಒಂದೊಂದು ಹೊಸಸಂಗತಿ ಕಲಿತುಕೊಂಡು ಹೋಗುತ್ತೇನೆ. ಇಂದಿನ ಕಾರ್ಯಕ್ರಮ ಅತ್ಯಂತ ಸಂತೋಷ ಕೊಟ್ಟಿದೆ ಎಂದರು. ಮಂಗಳೂರು ನಮ್ಮ ಕುಡ್ಲದ ಆಡಳಿತ ನಿರ್ದೇಶಕರಾದ ಲೀಲಾಕ್ಷ ಬಿ. ಕರ್ಕೇರಾ ತಂದೆಯ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸುವ ಅವಕಾಶ ಕಲ್ಪಿಸಿ ನಮ್ಮನ್ನು ಕೃತಾರ್ಥರನ್ನಾಗಿಸಿದ್ದಾರೆ ಎಂದರು.
ಹೊನ್ನಾವರ ಎಂ.ಪಿ.ಇ ಸೊಸೈಟಿಯ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಾನಿ ಕೃಷ್ಣಮೂರ್ತಿ ಭಟ್ ಕಲಾರಂಗವು ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ತೊಡಕಾಗದಂತೆ ಸಮತ್ವ ದೃಷ್ಟಿಯಿಂದ ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡುವ ವಿಧಾನ ಮೆಚ್ಚುಗೆಯಾಯಿತು ಎಂದರು. ಪ್ರಶಸ್ತಿ ಪುರಸ್ಕೃತರ ಪರವಾಗಿ ಜಯಂತ ಅಮೀನ್, ಕಿಶೋರ್ ಸಿ. ಉದ್ಯಾವರ, ಕೆರೆಮನೆ ಶಿವಾನಂದ ಹೆಗಡೆ, ಉಪ್ಪುಂದ ನಾಗೇಂದ್ರ ರಾವ್, ದಿವಾಣ ಶಿವಶಂಕರ ಭಟ್ ಅನಿಸಿಕೆ ಹಂಚಿಕೊಂಡರು. ರಾಮಚಂದ್ರ ಪಾಂಗಣ್ಣಾಯ ಉಡುಪಿ, ಮಾನ್ಯ ನರಸಿಂಹ ಮರಕಾಲ, ಹನುಮಂತ ಗೌಡ ಸಿದ್ದಾಪುರ, ಸರಪಾಡಿ ವಿಠಲ ಶೆಟ್ಟಿ, ಮಂಜು ಗೌಡ ಗುಣವಂತೆ, ರಾಮಚಂದ್ರ ಹೆಗಡೆ ಗುಡ್ಡೇದಿಂಬ, ಸುಬ್ರಹ್ಮಣ್ಯ ಐತಾಳ ಶಂಕರನಾರಾಯಣ, ಬೇಳಂಜೆ ಸುಂದರ ನಾಯ್ಕ, ಉಪ್ಪುಂದ ನಾಗೇಂದ್ರ ರಾವ್, ಹಾರಾಡಿ ರಮೇಶ ಗಾಣಿಗ, ಜಿ. ಎಂ. ಶಿವಾನಂದ ಗೀಜಗಾರು ಸಾಗರ, ಬಸವ ಹಟ್ಟಿಯಂಗಡಿ, ಜಯರಾಮ ಭಟ್ ಪದ್ಯಾಣ, ಶಿವಶಂಕರ ಭಟ್ ಎಚ್. ಜಿ. ಕೊಪ್ಪ, ಸುಬ್ರಹ್ಮಣ್ಯ ಗಾಣಿಗ ಸಜಿಪ, ಶ್ಯಾಮ ನಾಯ್ಕ್ ಪೇತ್ರಿ, ಆನೆಕಲ್ಲು ಗಣಪತಿ ಭಟ್, ಕೆರೆಮನೆ ಶಿವಾನಂದ ಹೆಗಡೆ, ಬಾಲಕೃಷ್ಣ ಶೆಟ್ಟಿ ತಾರಿಯಡ್ಕ, ಸಂಜು ಕುಲಾಲ, ರಾಮ ಭಟ್ ಸಬ್ಬಣಕೋಡಿ, ದಿವಾಣ ಶಿವಶಂಕರ ಭಟ್, ಕೆದಿಲ ಜಯರಾಮ ಭಟ್, ಪ್ರಭಾಕರ ಆಚಾರ್ಯ ಇಂದ್ರಾಳಿ ಈ 24 ಕಲಾವಿದರನ್ನು ತಲಾ ರೂ. 20 ಸಾವಿರ ನಗದು ಸಹಿತ ಫಲಕ ನೀಡಿ ಸನ್ಮಾನಿಸಲಾಯಿತು.
ಶ್ರೀ ವಿನಾಯಕ ಮೇಳ, ಕೆರೆಕಾಡು ಸಂಸ್ಥೆಗೆ ಶ್ರೀ ವಿಶ್ವೇಶತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ರೂ. 1,00,000/- ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿ ಸದಸ್ಯರಾದ ಕಿಶೋರ್ ಸಿ. ಉದ್ಯಾವರ ಅವರಿಗೆ ಬೆಳ್ಳಿಯ ಹರಿವಾಣದಲ್ಲಿ ಫಲವಸ್ತು ನೀಡಿ ‘ಯಕ್ಷ ಚೇತನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ್ ರಾವ್ ಮತ್ತು ಉಪಾಧ್ಯಕ್ಷ ವಿ. ಜಿ. ಶೆಟ್ಟಿ ಸ್ವಾಮೀಜಿಯವರಿಗೆ ಫಲ-ಪುಷ್ಪ ಸಮರ್ಪಿಸಿದರು. ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪುರಸ್ಕೃತ ಕಲಾವಿದರನ್ನು ಪರಿಚಯಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್ ಧನ್ಯವಾದ ಸಮರ್ಪಿಸಿದರು. ಸಭೆಯ ಪೂರ್ವದಲ್ಲಿ ಸಂಸ್ಥೆಯ ಸದಸ್ಯ ಸುಜಯೀಂದ್ರ ಹಂದೆ ಎಚ್. ರಚನೆಯ ಬಡಗುತಿಟ್ಟು ಯಕ್ಷಗಾನ ‘ರಾಜಾ ದ್ರುಪದ’ ಸೊಗಸಾಗಿ ಪ್ರದರ್ಶಿಸಲ್ಪಟ್ಟಿತು.

