ಮಂಗಳೂರು : ಬೆಂಗಳೂರಿಗೆ ತೆರಳಲು ಸಿದ್ಧವಾಗಿದ್ದ ಇಂಡಿಗೋ ವಿಮಾನದಲ್ಲಿ ಟೇಕಾಫ್ ಹಂತದಲ್ಲೇ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಭಾರೀ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪೈಲಟ್ ಸಮಯಪ್ರಜ್ಞೆಯಿಂದ ತಕ್ಷಣ ವಿಮಾನವನ್ನು ನಿಲ್ಲಿಸಿದ್ದರಿಂದ ವಿಮಾನದಲ್ಲಿದ್ದ 229 ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 236 ಮಂದಿ ಸುರಕ್ಷಿತವಾಗಿದ್ದಾರೆ.
ಸಂಜೆ ಸುಮಾರು 6 ಗಂಟೆಯ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರಯಾಣಿಕರು ಹಾಗೂ ಸಿಬ್ಬಂದಿ ವಿಮಾನದಲ್ಲಿ ಕುಳಿತುಕೊಂಡ ಬಳಿಕ ಟೇಕಾಫ್ಗೆ ಅನುಮತಿ ದೊರೆತ ಹಿನ್ನೆಲೆಯಲ್ಲಿ ವಿಮಾನ ರನ್ವೇಯಲ್ಲಿ ವೇಗವಾಗಿ ಚಲಿಸಲು ಆರಂಭಿಸಿತ್ತು. ವಿಮಾನ ಮೇಲಕ್ಕೆ ಹಾರಲು ಕೆಲವೇ ಕ್ಷಣಗಳು ಬಾಕಿಯಿರುವಾಗ ಪೈಲಟ್ಗೆ ಇಂಜಿನ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ತಕ್ಷಣ ಎಚ್ಚೆತ್ತುಕೊಂಡ ಪೈಲಟ್ ತುರ್ತು ನಿರ್ಧಾರ ಕೈಗೊಂಡು ಬ್ರೇಕ್ ಹಾಕಿ ವಿಮಾನದ ವೇಗವನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣವು ಟೇಬಲ್ಟಾಪ್ ರನ್ವೇ ಹೊಂದಿರುವುದರಿಂದ ವಿಮಾನವನ್ನು ನಿಲ್ಲಿಸುವುದು ಸವಾಲಿನ ಕೆಲಸವಾಗಿತ್ತು. ಆದರೂ ಪೈಲಟ್ ಸಮಯಪ್ರಜ್ಞೆಯಿಂದ ವಿಮಾನವನ್ನು ನಿಯಂತ್ರಿಸಿ ರನ್ವೇಯ ಕೊನೆಯ ಭಾಗದಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟೇಕಾಫ್ ವೇಳೆ ಉಂಟಾದ ತಾಂತ್ರಿಕ ದೋಷದಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯವನ್ನು ಪೈಲಟ್ನ ಸಮಯೋಚಿತ ನಿರ್ಧಾರ ತಪ್ಪಿಸಿದೆ. ವಿಮಾನವನ್ನು ಸುರಕ್ಷಿತವಾಗಿ ನಿಲ್ಲಿಸಿದ ಬಳಿಕ ಪ್ರಯಾಣಿಕರನ್ನು ಕೆಳಗಿಳಿಸಲು ವ್ಯವಸ್ಥೆ ಮಾಡಲಾಯಿತು.
ಘಟನೆಯ ಬಳಿಕ ಇಂಡಿಗೋ ವಿಮಾನಯಾನ ಸಂಸ್ಥೆಯು ಪ್ರಯಾಣಿಕರ ಪ್ರಯಾಣಕ್ಕೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿಕೊಟ್ಟಿದ್ದು, ಪ್ರಯಾಣಿಕರನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದ ಸವಾಲಿನ ಟೇಬಲ್ಟಾಪ್ ರನ್ವೇಯಲ್ಲಿ ನಡೆದ ಈ ಘಟನೆಯಲ್ಲಿ ಪೈಲಟ್ ತೋರಿದ ಸಮಯಪ್ರಜ್ಞೆ ಹಾಗೂ ತುರ್ತು ನಿರ್ಧಾರದಿಂದ ನೂರಾರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

