ಮಡಿಕೇರಿಯ ರಾಜಾಸೀಟ್‌ಗೆ ತಾತ್ಕಾಲಿಕ ಬೀಗ: ಪ್ರವಾಸಿಗರಿಗೆ ನಿರಾಸೆ

0
9

ಮಡಿಕೇರಿ : ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮಡಿಕೇರಿಯ ಪ್ರಸಿದ್ಧ ರಾಜಾಸೀಟ್‌ಗೆ ಮುಂದಿನ 15 ದಿನಗಳ ಕಾಲ ಪ್ರವೇಶ ನಿರ್ಬಂಧ ವಿಧಿಸಲಾಗಿದೆ. ಸುಮಾರು 10 ವರ್ಷಗಳ ಬಳಿಕ ರಾಜಾಸೀಟ್ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ರಸ್ತೆ ಕಾಂಕ್ರೀಟೀಕರಣ ಕಾರ್ಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ರಾಜಾಸೀಟ್‌ಗೆ ಭೇಟಿ ನೀಡಲು ಬಯಸುವ ಪ್ರವಾಸಿಗರಿಗೆ ತಾತ್ಕಾಲಿಕ ನಿರಾಸೆ ಎದುರಾಗಿದೆ.

ಮಡಿಕೇರಿ ನಗರದ ಪ್ರಮುಖ ಸಂಪರ್ಕ ರಸ್ತೆಗಳಲ್ಲೊಂದಾಗಿರುವ ರಾಜಾಸೀಟ್ ರಸ್ತೆ ಜ. ತಿಮ್ಮಯ್ಯ ವೃತ್ತದಿಂದ ರಾಜಾಸೀಟ್, ಹೊಸ ಬಸ್ ನಿಲ್ದಾಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕಳೆದ ಹಲವು ವರ್ಷಗಳಿಂದ ರಸ್ತೆಯ ಸಮರ್ಪಕ ಅಭಿವೃದ್ಧಿ ನಡೆದಿರಲಿಲ್ಲ. ಆಗಾಗ್ಗೆ ತೇಪೆ ಹಾಕುವ ಮೂಲಕ ನಿರ್ವಹಣೆ ಮಾಡಲಾಗುತ್ತಿತ್ತು. ಕಳೆದ ಒಂದು ವರ್ಷದಿಂದ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸವಾರರು ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದರು. ರಸ್ತೆಯ ದುಸ್ಥಿತಿ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ಜಿಲ್ಲಾಡಳಿತ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದು, ಜಿಲ್ಲಾಧಿಕಾರಿ ಕಚೇರಿಯ ಹೆಬ್ಬಾಗಿಲಿನಿಂದ ಕುಂದುರುಮೊಟ್ಟೆ ದೇವಾಲಯದವರೆಗಿನ ಸುಮಾರು ಒಂದು ಕಿಲೋಮೀಟರ್ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಲಾಗುತ್ತಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಪ್ರವಾಸಿಗರಿಗೆ ನಿರಾಸೆ, ವ್ಯಾಪಾರಿಗಳಿಗೂ ಹೊಡೆತ

ರಾಜಾಸೀಟ್‌ನ ಸುಂದರ ಪ್ರಕೃತಿ ಸೌಂದರ್ಯ, ಮನಮೋಹಕ ಸೂರ್ಯಾಸ್ತ, ಬಣ್ಣಬಣ್ಣದ ಕಾರಂಜಿ ಹಾಗೂ ಮಕ್ಕಳ ಉದ್ಯಾನವನ ಪ್ರವಾಸಿಗರ ಪ್ರಮುಖ ಆಕರ್ಷಣೆಗಳಾಗಿವೆ. ಪ್ರತಿದಿನ ನೂರಾರು ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡುತ್ತಾರೆ. ಆದರೆ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ತಿಂಗಳ ಅಂತ್ಯದವರೆಗೆ ರಾಜಾಸೀಟ್ ಪ್ರವೇಶಕ್ಕೂ ನಿರ್ಬಂಧ ವಿಧಿಸಿರುವುದು ಪ್ರವಾಸಿಗರಿಗೆ ನಿರಾಸೆ ಮೂಡಿಸಿದೆ.

ಕಾಮಗಾರಿ ನಡೆಯುವ ಸ್ಥಳಕ್ಕೆ ಅನುಗುಣವಾಗಿ ಅಗತ್ಯವಿರುವ ಅವಧಿಗೆ ಮಾತ್ರ ಪ್ರವೇಶ ನಿರ್ಬಂಧ ವಿಧಿಸಬಹುದಿತ್ತು. ಸಂಪೂರ್ಣ ಪ್ರವಾಸಿ ತಾಣವನ್ನೇ ಬಂದ್ ಮಾಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ. ಮತ್ತೊಂದೆಡೆ ರಾಜಾಸೀಟ್ ರಸ್ತೆಯಲ್ಲಿರುವ ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ ನಿರ್ಬಂಧದಿಂದ ಹೊಡೆತ ಬಿದ್ದಿದೆ.

11 ಅತ್ತಿ ಮರಗಳ ತೆರವಿಗೆ ಪರಿಸರ ಪ್ರೇಮಿಗಳ ವಿರೋಧ

ರಸ್ತೆ ಅಭಿವೃದ್ಧಿ ಕಾಮಗಾರಿಯ ನಡುವೆಯೇ ರಸ್ತೆಯ ಬದಿಯಲ್ಲಿರುವ 11 ಅತ್ತಿ ಮರಗಳನ್ನು ತೆರವುಗೊಳಿಸುವ ಪ್ರಸ್ತಾಪವೂ ವಿವಾದಕ್ಕೆ ಕಾರಣವಾಗಿದೆ. ಮರಗಳನ್ನು ಉಳಿಸಿಕೊಂಡೇ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕಾದ ರಸ್ತೆ ಅಭಿವೃದ್ಧಿ ಕಾಮಗಾರಿ ಸದ್ಯ ಪ್ರವೇಶ ನಿರ್ಬಂಧ, ವ್ಯಾಪಾರಿಗಳ ನಷ್ಟ ಹಾಗೂ ಮರಗಳ ತೆರವು ವಿಚಾರವಾಗಿ ಚರ್ಚೆಗೆ ಗ್ರಾಸವಾಗಿದೆ. ಕಾಮಗಾರಿ ಶೀಘ್ರ ಪೂರ್ಣಗೊಂಡು ಪ್ರವಾಸಿಗರು ಮತ್ತು ಸ್ಥಳೀಯರಿಗೆ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸುವ ನಿರೀಕ್ಷೆಯಿದೆ.