ಒಣಹುಲ್ಲಿನ ಲಾರಿಗೆ ವಿದ್ಯುತ್ ತಂತಿ ಸ್ಪರ್ಶ: ಕ್ಷಣಾರ್ಧದಲ್ಲಿ ಬೆಂಕಿ!

0
9

ಉಡುಪಿ : ಒಣಹುಲ್ಲು ಸಾಗಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಕಾಣಿಸಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಕುಂಜಾಲು ಗ್ರಾಮದ ಆರೂರು ತೆಂಕುಬೆಟ್ಟುವಿನಲ್ಲಿ ನಡೆದಿದೆ.

ಲಾರಿಯಲ್ಲಿ ಒಣಹುಲ್ಲಿನ ಮೂಟೆಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ರಸ್ತೆಯ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಹುಲ್ಲಿಗೆ ತಗುಲಿದೆ. ಇದರಿಂದ ಏಕಾಏಕಿ ಒಣಹುಲ್ಲಿಗೆ ಬೆಂಕಿ ಹೊತ್ತಿಕೊಂಡಿದೆ.

ತಕ್ಷಣ ಎಚ್ಚೆತ್ತುಕೊಂಡ ಚಾಲಕ, ಬೆಂಕಿ ಕಾಣಿಸಿಕೊಂಡ ಎರಡು ಹುಲ್ಲಿನ ಮೂಟೆಗಳನ್ನು ಲಾರಿಯಿಂದ ಕೆಳಕ್ಕೆ ಎಸೆದು ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಬಳಿಕ ಲಾರಿಯನ್ನು ಸಮೀಪದ ಕ್ರೀಡಾಂಗಣದ ಬಳಿಗೆ ಕೊಂಡೊಯ್ದು ನೀರು ಹಾಯಿಸುವ ಮೂಲಕ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಚಾಲಕನ ಸಮಯಪ್ರಜ್ಞೆ ಮತ್ತು ತಕ್ಷಣದ ಕ್ರಮದಿಂದ ಭಾರಿ ಅನಾಹುತ ತಪ್ಪಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದ ಅಂದಾಜು 1.5 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.

ರಸ್ತೆ ಮೇಲ್ಭಾಗದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳ ಸುರಕ್ಷತೆ ಹಾಗೂ ಒಣಹುಲ್ಲಿನ ಸಾಗಾಟದ ವೇಳೆ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಈ ಘಟನೆ ಗಮನ ಸೆಳೆದಿದೆ.