
ಬ್ರಹ್ಮಾವರ: ಸ್ವರ್ಣ ನದಿಯ ತಟದಲ್ಲಿರುವ ಹಾವಂಜೆ ಗ್ರಾಮದ ಕೀಳಂಜೆ ಶ್ರೀ ಬೊಬ್ಬರ್ಯ ಮತ್ತು ಪರಿವಾರ ದೈವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ನವೆಂಬರ್ 19ರಂದು ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಅಂದು ಬೆಳಿಗ್ಗೆ 9 ಗಂಟೆಯಿಂದ ದೈವಗಳ ಸನ್ನಿಧಿಯಲ್ಲಿ ಖ್ಯಾತ ಜ್ಯೋತಿಷಿ ಶ್ರೀ ತೋನ್ಸೆ ಹಯವದನ ಭಟ್ ಅವರ ನೇತೃತ್ವದಲ್ಲಿ ಆರೂಢ ಪ್ರಶ್ನೆ ನಡೆಯಲಿದೆ. ಈ ಸಂದರ್ಭದಲ್ಲಿ ಕೀಳಂಜೆ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ರವೀಂದ್ರ ಭಟ್ ಉಪಸ್ಥಿತರಿರುವರು.
ಇದರ ಅಂಗವಾಗಿ ಶ್ರೀ ಬೊಬ್ಬರ್ಯ ಮತ್ತು ಪರಿವಾರ ದೈವಗಳ ಕಾಲವಧಿ ಕೋಲ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀ ನಂದಿಕೇಶ್ವರ ದೈವಸ್ಥಾನ ಕೀಳಂಜೆ ವಠಾರದಲ್ಲಿ ಅದೇ ದಿನ ಸಂಜೆ 6.30ಕ್ಕೆ ದೈವದ ಪೂಜಾ ವಿಧಿವಿಧಾನಗಳು ನಡೆಯಲಿವೆ.
ಅಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದ್ದು, ಶ್ರೀಮತಿ ಜಯಂತಿ ಮತ್ತು ಶ್ರೀ ಸುಂದರ ಪೂಜಾರಿ ಕೀಳಂಜೆ ಅವರು ಅನ್ನಸಂತರ್ಪಣೆಯ ಸೇವಾಕರ್ತರಾಗಿದ್ದಾರೆ.
ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಸಂಬಂಧಿಸಿದಂತೆ ನಡೆಯಲಿರುವ ಈ ಪುಣ್ಯಕಾರ್ಯದಲ್ಲಿ ಕೀಳಂಜೆ ಹಾಗೂ ಸುತ್ತಮುತ್ತಲಿನ ಊರಿನ ಭಕ್ತಾಭಿಮಾನಿಗಳು ತನು, ಮನ, ಧನದ ಸಹಕಾರದೊಂದಿಗೆ ಪಾಲ್ಗೊಳ್ಳುವಂತೆ ಅಭಿವೃದ್ಧಿ ಸಮಿತಿಯು ವಿನಂತಿಸಿದೆ.
ಶ್ರೀ ಬೊಬ್ಬರ್ಯ ಪರಿವಾರ ದೈವಸ್ಥಾನದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸರ್ವ ಸದಸ್ಯರು, ಮಹಿಳಾ ಸದಸ್ಯರು ಹಾಗೂ ಊರ-ಪರವೂರ ಭಕ್ತಾಭಿಮಾನಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದಾರೆ. ಬೋಟ್ ಸಾಯಿ ಶ್ಯಾಮ್, ಮಲ್ಪೆ, ಉಡುಪಿ ಇವರು ದೇವತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದ್ದಾರೆ.
