ರೈಲು ಗ್ರೂಪ್ ಬುಕಿಂಗ್ ನಿಯಮ ಸರಳೀಕರಣ: ಬರ್ತ್‌ಗಳ ಗರಿಷ್ಠ ಮಿತಿ ರದ್ದು, ಹೊಸ ಮಾರ್ಗಸೂಚಿ ಜಾರಿ

0
31

ಬೆಂಗಳೂರು: ಮದುವೆ, ಪ್ರವಾಸ, ಶೈಕ್ಷಣಿಕ ಪ್ರವಾಸ, ಕ್ರೀಡಾಕೂಟ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಗುಂಪಾಗಿ ರೈಲಿನಲ್ಲಿ ಪ್ರಯಾಣಿಸುವವರಿಗೆ ನೈಋತ್ಯ ರೈಲ್ವೆ ಸಿಹಿಸುದ್ದಿ ನೀಡಿದೆ. ರೈಲು ಟಿಕೆಟ್‌ಗಳ ಸಾಮೂಹಿಕ ಕಾಯ್ದಿರಿಸುವಿಕೆ (ಗ್ರೂಪ್ ಬುಕಿಂಗ್) ನಿಯಮಗಳನ್ನು ಸರಳಗೊಳಿಸಿರುವ ರೈಲ್ವೆ ಇಲಾಖೆ, ಈ ಹಿಂದಿನ ಮಾರ್ಗಸೂಚಿಗಳನ್ನು ರದ್ದುಗೊಳಿಸಿ ಹೊಸ ನಿಯಮಗಳನ್ನು ಪ್ರಕಟಿಸಿದೆ.

ಯಾರಿಗೆ ಅನ್ವಯ?

ಮದುವೆ ಸಮಾರಂಭಗಳಿಗೆ ತೆರಳುವವರು, ವಿದ್ಯಾರ್ಥಿಗಳ ಗುಂಪುಗಳು, ಯಾತ್ರಾರ್ಥಿಗಳು, ಕ್ರೀಡಾ ತಂಡಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಗುಂಪುಗಳು ಈ ಸೌಲಭ್ಯ ಪಡೆಯಬಹುದು. ದೃಢೀಕೃತ ಟಿಕೆಟ್, ಆರ್‌ಎಸಿ ಮತ್ತು ಕಾಯುವಿಕೆ ಪಟ್ಟಿಯ ಟಿಕೆಟ್‌ಗಳಿಗೂ ಈ ನಿಯಮ ಅನ್ವಯವಾಗಲಿದೆ.

ಬರ್ತ್‌ಗಳ ಗರಿಷ್ಠ ಮಿತಿ ರದ್ದು

ಹೊಸ ನಿಯಮದ ಪ್ರಮುಖ ಬದಲಾವಣೆಯೆಂದರೆ ಗ್ರೂಪ್ ಬುಕಿಂಗ್‌ನಲ್ಲಿ ಕಾಯ್ದಿರಿಸಬಹುದಾದ ಬರ್ತ್‌ಗಳ ಸಂಖ್ಯೆಗೆ ಈ ಹಿಂದೆ ಇದ್ದ ಗರಿಷ್ಠ ಮಿತಿಯನ್ನು ತೆಗೆದುಹಾಕಿರುವುದು. ಇನ್ನು ಮುಂದೆ ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು (ಸಿಆರ್‌ಎಸ್) ಅಥವಾ ನಿಲ್ದಾಣ ವ್ಯವಸ್ಥಾಪಕರು ಗುಂಪಿನ ಅಗತ್ಯ ಹಾಗೂ ಲಭ್ಯತೆಯನ್ನು ಪರಿಶೀಲಿಸಿ ಅನುಮತಿ ನೀಡಲಿದ್ದಾರೆ.

ಬೆಳಗ್ಗೆ 9 ಗಂಟೆಯಿಂದ ಬುಕಿಂಗ್‌ಗೆ ಅವಕಾಶ

ಮುಂಗಡ ಕಾಯ್ದಿರಿಸುವಿಕೆ ಆರಂಭವಾದ ಒಂದು ಗಂಟೆಯ ಬಳಿಕ, ಅಂದರೆ ಬೆಳಗ್ಗೆ 9 ಗಂಟೆಯಿಂದ ಪ್ರಮುಖ ನಿಲ್ದಾಣಗಳಲ್ಲಿರುವ ಸಂಬಂಧಪಟ್ಟ ಕಾಯ್ದಿರಿಸುವಿಕೆ ಕಚೇರಿಗಳಲ್ಲಿ ಗ್ರೂಪ್ ಬುಕಿಂಗ್‌ಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

ಗ್ರೂಪ್ ಬುಕಿಂಗ್ ಬಯಸುವವರು ಸಂಬಂಧಪಟ್ಟ ಅಧಿಕಾರಿಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬೇಕು. ವಿದೇಶಿ ಪ್ರವಾಸಿಗರು ಮತ್ತು ಅನಿವಾಸಿ ಭಾರತೀಯರ ಬುಕಿಂಗ್ ಹೊರತುಪಡಿಸಿ, ಇತರ ಸಂದರ್ಭಗಳಲ್ಲಿ ಟ್ರಾವೆಲ್ ಏಜೆಂಟ್‌ಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಅರ್ಜಿಯಲ್ಲಿ ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ ಮತ್ತು ವಿಳಾಸದ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಜೊತೆಗೆ ಪ್ರಯಾಣದ ಉದ್ದೇಶವನ್ನೂ ಸ್ಪಷ್ಟವಾಗಿ ತಿಳಿಸಬೇಕು. ಉದ್ದೇಶವನ್ನು ನಮೂದಿಸದ ಅರ್ಜಿಗಳಿಗೆ ಅನುಮತಿ ನೀಡಲಾಗುವುದಿಲ್ಲ.

ಹಿಂತಿರುಗುವ ಪ್ರಯಾಣಕ್ಕೂ ಬುಕಿಂಗ್

ಹಿಂತಿರುಗುವ ಪ್ರಯಾಣಕ್ಕೂ ಅದೇ ಬುಕಿಂಗ್ ಕಚೇರಿಯಲ್ಲಿ ಗ್ರೂಪ್ ಬುಕಿಂಗ್‌ಗೆ ಅನುಮತಿ ಪಡೆಯಬಹುದು. ಆದರೆ ಅದನ್ನು ಪ್ರತ್ಯೇಕ ಪ್ರಯಾಣವೆಂದು ಪರಿಗಣಿಸಿ ಕಾಯ್ದಿರಿಸಲಾಗುತ್ತದೆ.

ದುರುಪಯೋಗ ತಡೆಗೆ ವಿಶೇಷ ಕ್ರಮ

ಗ್ರೂಪ್ ಬುಕಿಂಗ್ ಸೌಲಭ್ಯದ ದುರುಪಯೋಗ ತಡೆಯಲು ಅನುಮತಿ ಪಡೆದ ಪ್ರತಿಯೊಂದು ಬುಕಿಂಗ್‌ನ ಪ್ರತ್ಯೇಕ ದಾಖಲೆ ನಿರ್ವಹಿಸುವಂತೆ ರೈಲ್ವೆ ಸೂಚಿಸಿದೆ. ಅರ್ಜಿ ಮತ್ತು ಪ್ರಯಾಣಿಕರ ಪಟ್ಟಿಯ ಪ್ರತಿ ಪುಟಕ್ಕೂ ಸಂಬಂಧಪಟ್ಟ ಅಧಿಕಾರಿಗಳ ಮೊಹರು ಹಾಗೂ ಸಹಿ ಕಡ್ಡಾಯವಾಗಿರಲಿದೆ.

ಹೊಸ ಮಾರ್ಗಸೂಚಿಗಳಿಂದ ನಿಜವಾದ ಉದ್ದೇಶಕ್ಕಾಗಿ ಗುಂಪಾಗಿ ಪ್ರಯಾಣಿಸುವವರಿಗೆ ಟಿಕೆಟ್ ಕಾಯ್ದಿರಿಸುವಿಕೆ ಸುಲಭವಾಗಲಿದ್ದು, ರೈಲ್ವೆ ಬುಕಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ.