ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧರ ರಕ್ಷಣೆ

0
36

ಉಡುಪಿ ಆರೋಗ್ಯದಲ್ಲಿ ಏರುಪೇರಾಗಿ ಗಂಭೀರ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧರೊಬ್ಬರನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕಾರ್ಯಾಚರಣೆಗೆ 112 ತುರ್ತು ಸಹಾಯವಾಣಿಯ ಸಿಬ್ಬಂದಿ ಸಂತೋಷ್ ಠಾಥೋಡ್ ಸಹಕರಿಸಿದ್ದಾರೆ.

ಜೋಡುಕಟ್ಟೆ ಬಳಿಯ ಖಾಸಗಿ ವೃದ್ಧಾಶ್ರಮದಲ್ಲಿ ವಾಸವಿದ್ದು, ಬದುಕಿನ ಸಂಧ್ಯಾಕಾಲ ಕಳೆಯುತ್ತಿದ್ದ ವೃದ್ಧರೊಬ್ಬರು ಕಟ್ಟಡದ ಮೂರನೇ ಮಹಡಿಯ ಕೊಠಡಿಯಲ್ಲಿ ಒಳಗಿನಿಂದ ಚಿಲಕ ಹಾಕಿಕೊಂಡು ಮಲಗಿದ್ದರು. ಬಹಳ ಸಮಯ ಕಳೆದರೂ ಅವರು ಕೊಠಡಿಯಿಂದ ಹೊರಬಾರದಿರುವುದನ್ನು ಗಮನಿಸಿದ ವೃದ್ಧಾಶ್ರಮದ ಸಿಬ್ಬಂದಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಆದರೆ, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ತುರ್ತು ಸಹಾಯವಾಣಿ ಸಿಬ್ಬಂದಿ ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೆರವು ಪಡೆದುಕೊಂಡರು. ಬಳಿಕ ಕೊಠಡಿಯ ಬಾಗಿಲಿನ ಚಿಲಕ ಮುರಿದು ಒಳಪ್ರವೇಶಿಸಿದಾಗ ವೃದ್ಧರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.