ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ – 2026

0
8

ವೈದ್ಯಗೀತೆಗಳ ಕವಿಗೋಷ್ಠಿಯಲ್ಲಿ ಡಾ. ಸುರೇಶ ನೆಗಳಗುಳಿ ಅವರ ಗಜಲ್ ವಾಚನಕ್ಕೆ ಭಾರೀ ಮೆಚ್ಚುಗೆ

ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (BMCRI), ಬೆಂಗಳೂರಿನಲ್ಲಿ ಆಯೋಜಿಸಲಾದ ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ – 2026 ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

ಮೊದಲ ದಿನದ ಕಾರ್ಯಕ್ರಮ: ದಿನಾಂಕ 20-11-2026 ಶುಕ್ರವಾರ ಮಧ್ಯಾಹ್ನ 2.00 ರಿಂದ 4.00 ಗಂಟೆಯವರೆಗೆ ಅನುಪಮ ನಿರಂಜನ ವೇದಿಕೆ (2ನೇ ಮಹಡಿ)ಯಲ್ಲಿ ವೈದ್ಯಗೀತೆಗಳ ಕವಿಗೋಷ್ಠಿ ಜರುಗಿತು.

ಈ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಕವಯಿತ್ರಿ, ದೂರದರ್ಶನ ಕೇಂದ್ರ, ಬೆಂಗಳೂರು ಕಾರ್ಯಕ್ರಮ ಮುಖ್ಯಸ್ಥರು ಆದ ಡಾ. ಹೆಚ್.ಎನ್. ಆರತಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಪಾರ್ಶ್ವನಾಥ್ ಅವರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಡಾ. ನಿರಂಜನ್ ಎಲ್ಲೂರು ನಿರ್ವಹಿಸಿದರೆ, ಡಾ. ವೀಣಾ ಎನ್. ಸುಳ್ಯ ಸಹಕರಿಸಿದರು.

22 ವೈದ್ಯ ಕವಿಗಳ ಕವನ ವಾಚನ: ಈ ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 22 ವೈದ್ಯ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

ಡಾ. ಕಿರಣ್ ಪೇಟ್ಕರ್, ಡಾ. ಅರವಿಂದ ಪಟೇಲ್, ಡಾ. ವಿನ್ಯಾಸಚಂದ್ರ ವೈ, ಡಾ. ಸುರೇಶ್ ಸಗರದ, ಡಾ. ಲಕ್ಷ್ಮಣ್ ವಿ.ಎ, ಡಾ. ಕರವೀರ ಪ್ರಭು ಕ್ಯಾಲಗೊಂಡ, ಡಾ. ಹನುಮಂತಾಚಾರ್ ಜೋಶಿ, ಡಾ. ಪದ್ಮಿನಿ ಪ್ರಸಾದ್, ಡಾ. ಸವಿತಾ ಸೋಮಯಾಜಿ, ಡಾ. ರಮಾ ಎನ್. ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಡಾ ನಾ ಸೋಮೇಶ್ವರ, ಡಾ ಸಿ ಎಸ್ ಚಂದ್ರಶೇಖರ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು

ಇದರಲ್ಲಿ ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ನಾಟೆಕಲ್, ಮಂಗಳೂರು ಇದರ ವೈದ್ಯಕೀಯ ಅಧೀಕ್ಷಕರು ಆದ ಡಾ. ಸುರೇಶ ನೆಗಳಗುಳಿ ಅವರು ತಮ್ಮ ವಿಶಿಷ್ಟ ಗಜಲ್ ಅನ್ನು ಪ್ರಸ್ತುತಪಡಿಸಿದರು.

ಅವರು ವಾಚಿಸಿದ ಗಜಲ್ 

ನೆಮ್ಮದಿಯ ಅಡವಿಟ್ಟು ಆತುರನ ಎದೆ ಬಡಿತ ಉಳಿಸುವನು ಅವನು 
ದಮ್ಮುಕಳೆದುಳಿಸೆ ರೋಗಿಯ ಸ್ವಂತ ಸುಖ ಕಡಿತ ಗೊಳಿಸುವನು ಅವನು 

ತಿಳಿದು ಮಾಡುವ ತಪ್ಪು ಭಸ್ಮಾಸುರನ ಹಾಗೆ ತನಗೆ ತಾನೇ ನಾಶಕಾರಿ 
ಹಳಿಯದೆಯೆ ಹಿತವಾದ ಉಪದೇಶ ಕೊಡುತ ಸಂತೈಸುವನು ಅವನು 

ಇರದಿರಲು ಸರಿಯಾಗಿಯೇ ನವ ಸ್ರೋತಸ್ಸುಗಳ ಚಲನೆ ರೋಗ ಪ್ರಾಪ್ತಿ 
ಕೊರೆದು ಜೋಡಿಸಿ ಮರಳಿ ಸರಿ ಇಡುತ ಸರಿಪಡಿಸುವನು ಅವನು 

ಕರ ಕುಶಲ ವಿಶ್ವ ಕರ್ಮನದು ಬಡಗಿಯದು ಶಿಲ್ಪಿಯದು ಚತುರನಾತ 
ಪರಿಪರಿಯ ಶಸ್ತ್ರ ಶಾಸ್ತ್ರಗಳ ಚತುರ ಹಿಡಿತ ಇರುವವನು ಅವನು 

ನೋವಿರಲು ರೋಗಕ್ಕೆ ಹೆಬ್ಬಾಗಿಲಾಗುವುದು ಹಿತವ ಕೆಡಿಸಿ ತಾನು 
ನಾವೆಯನು ನಡೆಸಿ ದಡದೆಡೆ ಸೊಗ ಪಡುತ ನಡೆಯೆನ್ನುವನು 
ಅವನು 

ಆಚಾರ ಆಹಾರ ವಿಚಾರ ನಿದಿರೆ ವಿಹಾರ ಜೊತೆ ಬ್ರಹ್ಮಚರ್ಯ ಬೇಕಂತೆ 
ಗೋಚಾರ ಸುಫಲ ಸಂತಸಕಾಗಿ ಮದ್ದುಮರ ನೆಡುತ ಬೆಳೆಸುವನು ಅವನು 

ಜೀವoತ ಯಂತ್ರದಿ ಸೆಣಸುವ ಅಭಿಯಂತರನು ಸುಜ್ಞಾನಿ ಗೊತ್ತೇನು 
ಕಾವಹರಿ ಪರಕಾಯ ಹೊಂದಿದ ಬೆಜ್ಜ ಮಿಡಿತ ಬಿಡದವನು ಅವನು 

ವೇದಿಕೆಯ ಹಿಂಭಾಗದ ಪರದೆಯ ಮೇಲೆ ಅವರ ಕವನದ ಸಾಲುಗಳು ಪ್ರದರ್ಶನವಾಗುತ್ತಿದ್ದು, ಅದರೊಂದಿಗೆ ಅವರ ಭಾವಪೂರ್ಣ ವಾಚನ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ಕವಿಗಳನ್ನು ಗೌರವಿಸಲಾಯಿತು.

ಈ ಸಮ್ಮೇಳನವು ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯಕ್ಕೆ ಹೊಸ ಮೈಲಿಗಲ್ಲಾಗಿದ್ದು, ವೈದ್ಯರು ಕೇವಲ ಔಷಧ ನೀಡುವವರಲ್ಲ, ಸಮಾಜಕ್ಕೆ ಸಾಹಿತ್ಯದ ಮೂಲಕವೂ ಆರೋಗ್ಯ ಸಂದೇಶ ನೀಡಬಲ್ಲರು ಎಂಬುದನ್ನು ಸಾಬೀತುಪಡಿಸಿದೆ.