ಗೃಹಲಕ್ಷ್ಮಿ ಹಣದ ಆಸೆಗೆ ಅಜ್ಜಿಯನ್ನೇ ಮುಗಿಸಿದ ಮೊಮ್ಮಗ!

0
9

ಹಣ ಮತ್ತು ಆಸ್ತಿಯ ಆಸೆಗೆ ಮನುಷ್ಯ ಎಂತಹ ಕ್ರೂರ ಕೃತ್ಯಕ್ಕೂ ಕೈಹಾಕಬಲ್ಲ ಎಂಬುದಕ್ಕೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣದ ವಿಚಾರವಾಗಿ ಸ್ವಂತ 78 ವರ್ಷದ ಅಜ್ಜಿ ಹಮ್ಮವ್ವ ಅವರನ್ನು ಮೊಮ್ಮಗನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ತೀವ್ರ ಆಘಾತ ಮೂಡಿಸಿದ ಘಟಣೆ ಬೆಳಗಾವಿಯಲ್ಲಿ ನಡೆದಿದೆ.

ಹಮ್ಮವ್ವ ಅವರಿಗೆ ಮೂವರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದು, ಎಲ್ಲರೂ ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದರು. ಹೀಗಾಗಿ ಅವರು ಕರಿಯ ಮಗನ ಮನೆಯಲ್ಲಿ ವಾಸಿಸುತ್ತಿದ್ದರು. ಕಿರಿಯ ಮಗನ ಪಡಿತರ ಚೀಟಿಯಲ್ಲಿ ಅಜ್ಜಿಯ ಹೆಸರು ಇದ್ದುದರಿಂದ ಗೃಹಲಕ್ಷ್ಮಿ ಯೋಜನೆಯ ಹಣ ಅವರಿಗೆ ಬರುತ್ತಿತ್ತು. ಈ ಹಣದ ವಿಚಾರವೇ ಕುಟುಂಬದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.

ಅಜ್ಜಿಯ ಹಣ ಹಾಗೂ ಒಡವೆಗಳ ಮೇಲೆ ಕಣ್ಣಿಟ್ಟಿದ್ದ ಮೊಮ್ಮಗ ಭೀಮಪ್ಪ, ನವೆಂಬರ್ 10ರಂದು ಬೆಳ್ಳಿ ಖರೀದಿಸುವ ನೆಪದಲ್ಲಿ ಹಮ್ಮವ್ವ ಅವರನ್ನು ಕುಂದರಗಿ ಗ್ರಾಮಕ್ಕೆ ಕರೆದೊಯ್ದಿದ್ದಾನೆ. ಬಳಿಕ ಅಂಕಲಗಿ ಗ್ರಾಮಕ್ಕೆ ತೆರಳಿ, ಅಲ್ಲಿಂದ ಗವಿ ಸಿದ್ದೇಶ್ವರ ಬೆಟ್ಟದ ಕಡೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಹಣದ ವಿಚಾರವಾಗಿ ಅಜ್ಜಿಯೊಂದಿಗೆ ಜಗಳವಾಡಿದ್ದು, ಹಣ ನೀಡಲು ನಿರಾಕರಿಸಿದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕೊಲೆ ಬಳಿಕ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಮನೆಗೆ ಮರಳಿದ್ದ ಆರೋಪಿ, ಸಂಜೆ ಮತ್ತೆ ಸ್ಥಳಕ್ಕೆ ತೆರಳಿ ಎರಡು ಗೋಣಿಚೀಲಗಳಲ್ಲಿ ಮೃತದೇಹದ ಜೊತೆಗೆ ಕಲ್ಲುಗಳನ್ನು ತುಂಬಿದ್ದಾನೆ. ಬಳಿಕ ಕತ್ತಲಾದ ನಂತರ ಹಿಡಕಲ್ ಡ್ಯಾಂ ಹಿನ್ನೀರಿನಲ್ಲಿ ಮೃತದೇಹವನ್ನು ಎಸೆದು ಮನೆಗೆ ವಾಪಸ್ಸಾಗಿದ್ದಾನೆ.

ಈ ಕೃತ್ಯದ ಬಗ್ಗೆ ಆರೋಪಿಯ ತಂದೆ ರಾಮಪ್ಪನಿಗೂ ಮಾಹಿತಿ ಇತ್ತು ಎನ್ನಲಾಗಿದ್ದು, ಆದರೂ ವಿಷಯವನ್ನು ಮುಚ್ಚಿಟ್ಟಿದ್ದಾನೆ. ಅಜ್ಜಿ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾದ ಬಳಿಕ ಕುಟುಂಬದವರೊಂದಿಗೆ ಸೇರಿ ಹುಡುಕಾಟ ನಡೆಸಿದಂತೆ ನಟಿಸಿದ್ದಾನೆ. ಆದರೆ ಪೊಲೀಸರ ತನಿಖೆ ಮೊಮ್ಮಗನ ಮೇಲೆ ಕೇಂದ್ರೀಕೃತವಾಗುತ್ತಿದ್ದಂತೆ ಪ್ರಕರಣದ ಅಸಲಿ ಸಂಗತಿ ಬೆಳಕಿಗೆ ಬಂದಿದೆ.

ಅಜ್ಜಿಯನ್ನು ಕೊಲೆ ಮಾಡಿದ ಬಳಿಕ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿದ್ದ ಭೀಮಪ್ಪನನ್ನು ಪೊಲೀಸರು ಬಂಧಿಸಿದ್ದು, ಕೃತ್ಯವನ್ನು ತಿಳಿದಿದ್ದರೂ ಮಾಹಿತಿ ಮುಚ್ಚಿಟ್ಟ ಆರೋಪದಡಿ ತಂದೆ ರಾಮಪ್ಪನ ಮೇಲೂ ಕ್ರಮ ಕೈಗೊಳ್ಳಲಾಗಿದೆ.

ಹಣದ ಆಸೆಗೆ ರಕ್ತಸಂಬಂಧವನ್ನೇ ಮರೆತು ಅಜ್ಜಿಯ ಜೀವ ತೆಗೆದ ಮೊಮ್ಮಗನ ಕೃತ್ಯ ಮಾನವೀಯ ಸಂಬಂಧಗಳ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ.