ಬ್ರಹ್ಮಾವರ : ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಹಾಗೂ ಮಾರಾಟಗಾರರ ಸಂಘ (ರಿ.), ಬ್ರಹ್ಮಾವರ ಇದರ ವತಿಯಿಂದ ಸಂಘದ ದಶಮಾನೋತ್ಸವದ ಅಂಗವಾಗಿ ‘ಉಡುಪಿ ಆಹಾರ ಮತ್ತು ಉದ್ಯಮ ಮೇಳ-2026’ ಕಾರ್ಯಕ್ರಮವನ್ನು ನವೆಂಬರ್ 27, 28 ಮತ್ತು 29ರಂದು ಬ್ರಹ್ಮಾವರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.
ಆಹಾರೋಧ್ಯಮ ಯಂತ್ರಗಳ ಮಾರಾಟ ಮತ್ತು ಪ್ರದರ್ಶನ, ಗೃಹಪಯೋಗಿ ವಸ್ತುಗಳ ಮಾರಾಟ ಮತ್ತು ಪ್ರದರ್ಶನ, ಕರಾವಳಿಯ ಸಾಂಪ್ರದಾಯಿಕ ಖಾದ್ಯ ವೈವಿಧ್ಯದ ಆಹಾರಮೇಳ, ವೈಭವದ ಪುರ ಮೆರವಣಿಗೆ, ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಮನೋರಂಜನಾ ಆಟಗಳು, ಆಹಾರೋದ್ಯಮ ರತ್ನ ಉದ್ಯಮ ರತ್ನ ಪ್ರಶಸ್ತಿ ಪ್ರಧಾನ, ಒಳಗೊಂಡಂತೆ ಮೂರು ದಿನಗಳ ಕಾಲ ನಡೆಯಲಿರುವ ಈ ಮೇಳವು ಪ್ರತಿದಿನ ಬೆಳಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.
ಆಹಾರ ಮೇಳದೊಂದಿಗೆ ಉದ್ಯಮ, ವ್ಯಾಪಾರ, ಸಂಸ್ಕೃತಿ ಹಾಗೂ ಮನರಂಜನೆಗೆ ವಿಶೇಷ ಆದ್ಯತೆ ನೀಡಲಾಗಿದೆ.
ನವೆಂಬರ್ 27ರಂದು ಸಂಜೆ 4.30ಕ್ಕೆ ವೈಭವದ ಪುರ ಮೆರವಣಿಗೆ, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ 6.30ಕ್ಕೆ ಉಡುಪಿ ಆಹಾರ ಮತ್ತು ಉದ್ಯಮ ಮೇಳ-2026ರ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾತ್ರಿ 7 ಗಂಟೆಗೆ ದಶಮಾನೋತ್ಸವ ಸಂಭ್ರಮ- “ದಶರುಚಿ-2026” ಸಭಾ ಕಾರ್ಯಕ್ರಮ ಕಾರ್ಯಕ್ರಮ ಹಾಗೂ ರಾತ್ರಿ 8.30 ರಿಂದ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ ಕಲಾವಿದರು ಮಂಗಳೂರು ಇವರು ಪ್ರಸ್ತುತಪಡಿಸುವ ಸಾಂಸ್ಕೃತಿಕ ಸಂತಸ ನೃತ್ಯರೂಪಕ ಜರುಗಲಿದೆ.
ನವೆಂಬರ್ 28ರಂದು ಸಂಜೆ 5.45ರಿಂದ ಯಕ್ಷಗಾನ,ನಾಟ್ಯ, ಹಾಸ್ಯ ಸಂಚಯ ಹಾಗೂ ರಾತ್ರಿ 8 ಗಂಟೆಗೆ ವಿಶೇಷ ಸಭಾ ಕಾರ್ಯಕ್ರಮ “ದಶರುಚಿ” ಸಿಂಹಾವಲೋಕನ ಸಭೆ ಮತ್ತು ರಾತ್ರಿ 9.30ಕ್ಕೆ ಸಾಂಸ್ಕೃತಿಕ ಸಂತಸ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳು ಮಣಿಪಾಲ ಇಲ್ಲಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸುವ “ನಿನಾದ” ಹೆಜ್ಜೆ ಗೆಜ್ಜೆಗಳ ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ.
ನವೆಂಬರ್ 29ರಂದು ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 7 ಗಂಟೆಗೆ ಉಡುಪಿ ಉದ್ಯಮ ಮತ್ತು ಆಹಾರ ಮೇಳ-2026ರ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ 8.30ಕ್ಕೆ ‘ಉಡುಪಿ ಸರಿಗಪಮಪ ’ ಗಾಯನ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಪ್ರೇಕ್ಷಕರನ್ನು ರಂಜಿಸಲಿದೆ.
ಮೇಳದಲ್ಲಿ ಆಹಾರೋದ್ಯಮ, ಗೃಹೋಪಯೋಗಿ ವಸ್ತುಗಳು, ಕೃಷಿ ಉತ್ಪನ್ನಗಳು, ಕರಕುಶಲ ವಸ್ತುಗಳು, ಮನೋರಂಜನಾ ಆಟಗಳು ಸೇರಿದಂತೆ ವಿವಿಧ ಮಳಿಗೆಗಳು ಇರಲಿವೆ. ಸ್ಥಳೀಯ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸಲು ಹಾಗೂ ಸಾರ್ವಜನಿಕರಿಗೆ ವಿವಿಧ ಆಹಾರ ಪದಾರ್ಥಗಳು ಮತ್ತು ಉತ್ಪನ್ನಗಳನ್ನು ಒಂದೇ ವೇದಿಕೆಯಲ್ಲಿ ವೀಕ್ಷಿಸಲು ಉತ್ತಮ ಅವಕಾಶ ಕಲ್ಪಿಸಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳವನ್ನು ಯಶಸ್ವಿಗೊಳಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

