ಮೂರು ಕಂದಮ್ಮಗಳ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಬರಸಿಡಿಲು; ಇಬ್ಬರು ಶಿಶುಗಳು ಮೃತ್ಯು

0
8

ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಎಂಟು ತಿಂಗಳ ಗರ್ಭಿಣಿಯೊಬ್ಬರ ಹೊಟ್ಟೆಯಲ್ಲಿದ್ದ ತ್ರಿವಳಿ ಶಿಶುಗಳ ಪೈಕಿ ಎರಡು ಶಿಶುಗಳು ಮೃತಪಟ್ಟಿದ್ದು, ಮತ್ತೊಂದು ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಆಸ್ಪತ್ರೆಯ ಚಿಕಿತ್ಸಾ ವ್ಯವಸ್ಥೆ ಹಾಗೂ ವೈದ್ಯರ ನಿರ್ಲಕ್ಷ್ಯದ ಕುರಿತು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದು, ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆಯು ಬೆಂಗಳೂರಿನಲ್ಲಿ ನಡೆದಿದೆ.

ಐಶ್ವರ್ಯ ಎಂಬ ಗರ್ಭಿಣಿ ಮಲಬದ್ಧತೆ ಸಮಸ್ಯೆಯಿಂದ ಸುಮಾರು ಒಂದು ವಾರದ ಹಿಂದೆ ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರಿಂದ ಚಿಕಿತ್ಸೆ ಪಡೆದ ಬಳಿಕ ಮನೆಗೆ ಮರಳಿದ್ದ ಅವರು, ನೋವು ಕಡಿಮೆಯಾಗದ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ನವೆಂಬರ್ 21ರ ಬೆಳಗ್ಗೆ ತ್ರಿವಳಿ ಶಿಶುಗಳ ಪೈಕಿ ಒಂದು ಮಗು ಮೃತಪಟ್ಟಿರುವುದು ತಿಳಿದುಬಂದಿತ್ತು.

ಭಾನುವಾರ (ನವೆಂಬರ್ 22) ಮತ್ತೊಂದು ಮಗು ಕೂಡ ಮೃತಪಟ್ಟಿದ್ದು, ಮೂರನೇ ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಶನಿವಾರವೇ ಶಸ್ತ್ರಚಿಕಿತ್ಸೆ ನಡೆಸುವುದಾಗಿ ವೈದ್ಯರು ತಿಳಿಸಿ ಗರ್ಭಿಣಿಯನ್ನು ಉಪವಾಸ ಇರಿಸಿದ್ದರು. ಆದರೆ, ರಾತ್ರಿ ಶಸ್ತ್ರಚಿಕಿತ್ಸೆ ನಡೆಸಲು ಸಾಧ್ಯವಿಲ್ಲ ಎಂದು ಮುಂದೂಡಿದ್ದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಮೊದಲ ಮಗು ಮೃತಪಟ್ಟಿದ್ದರೂ ಉಳಿದ ಎರಡು ಶಿಶುಗಳನ್ನು ಉಳಿಸಲು ಸೂಕ್ತ ಸಮಯದಲ್ಲಿ ಕ್ರಮ ಕೈಗೊಂಡಿಲ್ಲ ಎಂಬುದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಭಾನುವಾರ ಬೆಳಗ್ಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಬಳಿಕವೂ ಗರ್ಭಿಣಿಗೆ ಸೂಕ್ತ ಬೆಡ್ ವ್ಯವಸ್ಥೆ ಮಾಡಿಕೊಡಲಿಲ್ಲ. ಬೆಡ್ ಸಿಗದೆ ಲೇಬರ್ ರೂಮ್‌ನಲ್ಲೇ ನೆಲದ ಮೇಲೆ ಮಲಗಬೇಕಾಯಿತು. ನೋವಿನಿಂದ ಬಳಲುತ್ತಿದ್ದರೂ ಅಗತ್ಯ ಸೌಲಭ್ಯಗಳು ದೊರೆಯಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.

ಘಟನೆಯಿಂದ ಆಕ್ರೋಶಗೊಂಡ ಕುಟುಂಬ ಸದಸ್ಯರು ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ವೈದ್ಯಕೀಯ ನಿರ್ಲಕ್ಷ್ಯದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತೃತೀಯ ಶಿಶುವಿನ ಆರೋಗ್ಯದ ಬಗ್ಗೆ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ.

ಆಸ್ಪತ್ರೆಯ ಚಿಕಿತ್ಸಾ ಕ್ರಮ, ಶಸ್ತ್ರಚಿಕಿತ್ಸೆ ವಿಳಂಬ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಕುರಿತು ಕುಟುಂಬಸ್ಥರು ಮಾಡಿರುವ ಆರೋಪಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.