ಸುರತ್ಕಲ್ ನ ಶುಭಗಿರಿ ಹಾಲ್ ಶಾಖೆಯಲ್ಲಿ ನಡೆದ ಅಗರಿ ಹಬ್ಬ ಹಬ್ಬಗಳ ಉತ್ಸವದಲ್ಲಿ ಕುಳಾಯಿ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ದಿವಂಗತ ಶೀನಪ್ಪ ಅಮೀನ್ ಮತ್ತು ಶ್ರೀಮತಿ ಪುರಂದರಿ ಇವರ ಸುಪುತ್ರರಾದ, ಸಾಮಾಜಿಕ ಮುಂದಾಳು, ಧಾರ್ಮಿಕ ಮುತ್ಸದ್ದಿ, ಸಮರ್ಥ ಸಂಘಟಕರೂ ಹಾಗೂ ಸಮಾಜ ಸೇವಕರೂ ಆದ ಯೋಗೀಶ್ ಸನಿಲ್ ಕುಳಾಯಿ ಇವರನ್ನು ಅಭಿನಂದಿಸಲಾಯಿತು.
ಊರಿನ ವಿವಿಧ ಸಂಘ-ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಹೊಂದಿ, ಅವುಗಳ ಚಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಸಹಕಾರ ನೀಡುತ್ತಾ ಬಂದಿರುವಿರಿ. ವಿಶೇಷವಾಗಿ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮ ಆಸಕ್ತಿ, ಶ್ರದ್ಧೆ ಹಾಗೂ ಸಮರ್ಪಣಾ ಮನೋಭಾವ ಅನುಕರಣೀಯವಾಗಿದೆ. ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಿಂತು, ಸಂಘಟನಾ ಸಾಮರ್ಥ್ಯ ಹಾಗೂ ಕಾರ್ಯದಕ್ಷತೆಯಿಂದ ಸೇವೆ ಸಲ್ಲಿಸುತ್ತಿರುವುದು ತಮ್ಮ ಧಾರ್ಮಿಕ ಬದ್ಧತೆಗೆ ಸಾಕ್ಷಿಯಾಗಿದೆ. ಸಮಾಜದ ಹಿತಕ್ಕಾಗಿ ಎಲ್ಲರನ್ನೂ ಒಗ್ಗೂಡಿಸುವ ಗುಣ, ಹಿರಿಯರ ಮಾರ್ಗದರ್ಶನಕ್ಕೆ ನೀಡುವ ಗೌರವ, ಕಿರಿಯರನ್ನು ಪ್ರೋತ್ಸಾಹಿಸುವ ಹೃದಯವಂತಿಕೆ ಹಾಗೂ ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರೂ ಅದನ್ನು ಯಶಸ್ವಿಯಾಗಿ ಮುನ್ನಡೆಸುವ ಸಂಘಟನಾ ಕೌಶಲ್ಯ ತಮ್ಮಲ್ಲಿರುವ ವಿಶಿಷ್ಟ ಗುಣಗಳಾಗಿವೆ. ಸಮಾಜದ ಒಳಿತಿಗಾಗಿ ಸದಾ ತುಡಿಯುವ ತಮ್ಮ ಸೇವಾ ಮನೋಭಾವವು ನಿಜಕ್ಕೂ ಪ್ರಶಂಸನೀಯ ಎಂದು ಅಗರಿ ರಾಘವೇಂದ್ರರಾವ್ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಸಂಜಯ್ ಕುಮಾರ್ ಶೆಟ್ಟಿ, ನಿವೃತ್ತ ದೈಹಿಕ ಶಿಕ್ಷಕಿ ಶ್ರೀಮತಿ ಸತ್ಯರಾಣಿ, ಹೊಸಬೆಟ್ಟು ಮೀನುಗಾರರ ಸಹಕಾರಿ ಸಂಘದ ನಿರ್ವಾಹಕರು ಶ್ರೀಮತಿ ಪ್ರಮೀಳಾ ಕೋಟ್ಯಾನ್, ಮಂಗಳೂರು ಟ್ರಾನ್ಸ್ಪೋರ್ಟ್ ಕಂಟ್ರಾಕ್ಟರ್ ಮತ್ತು ಏಜಂಟರ್ ಗಳ ಅಸೋಸಿಯೇಷನ್ ನ ಜತೆಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ವಿದ್ಯಾದಾಯಿನೀ ಆಂಗ್ಲ ಮಾಧ್ಯಮ ಶಾಲೆ ಸುರತ್ಕಲ್ ಇದರ ಶಿಕ್ಷಕಿ ಮೀರಾ ರಘುಚಂದ್ರ, ಲಕ್ಷ್ಮೀ ಗುರುರಾಜ್ ಯನ್ ಯನ್ ಯು ಇದರ ಟೀಮ್ ಮ್ಯಾನೇಜರ್ ಶ್ರೀಲಲಿತಾ ಪ್ರವೀಣ್ ಉಡುಪಿ, ಅನುದಾನಿತ ಶ್ರೀವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ ಕುಳಾಯಿ ಇದರ ನಿವೃತ್ತ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ರಾವ್, ನ್ಯೂ ಪ್ರಕೃತಿ ಬ್ಯುಟಿ ಪಾರ್ಲರ್ ನ ಮ್ಹಾಲಕಿ ಅನೀತಾ ಜೆ ಅಮೀನ್, ಯಕ್ಷಗಾನ ಗುರುಗಳಾದ ಗಣೇಶಪುರ ಗಿರೀಶ್ ನಾವಡ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀನಿವಾಸ ಕುಳಾಯಿ ಮತ್ತು ಪವನ್ ಮೈರ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಮ್ಯಾನೇಜರ್ ಮಹೇಶ್ ದೇವಾಡಿಗ ಮತ್ತು ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

