ಭಾಷೆ ಬಳಸಿದಾಗ ಮಾತ್ರ ಬೆಳೆಯುವುದು!

0
11

1975
ನಾವೆಲ್ಲಾ ಆಗ ಪಿಳಿ ಪಿಳಿ ಕಣ್ಣು ಬಿಟ್ಟು ಪ್ರಪಂಚದ ಅದ್ಭುತವನ್ನು ದೃಷ್ಠಿ ತುಂಬಿಕೊಳ್ಳುತ್ತಿದ್ದ ಎಳೆ ಬಾಲ್ಯದಲ್ಲಿದ್ದವರು.ತಂದೆಯೋ ತಾಯಿಯೋ ಸರಕಾರಿ ಶಾಲೆಯ ಬಾಗಿಲಿಗೆ ಎಳೆದು ತಂದು ಬಿಟ್ಟು ಬಂದರೆ ಅವರು ಮನೆ ತಲುಪುವ ಮೊದಲೇ ತಪ್ಪಿಸಿಕೊಂಡು ಮನೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದ ತುಂಟ ಬುದ್ಧಿಯ ವಯಸ್ಸದು. ಭಾಷೆಯ ಬಗ್ಗೆ ಮಾನ ಅಭಿಮಾನವೆಂದರೇನೆಂದೇ ತಿಳಿಯದ ಮಂಕು ಬುದ್ಧಿ.

ಅದು ಕಳೆದು ಸುಮಾರು 50 ವರ್ಷಗಳ ನಂತರ ಅರ್ಧ ಬದುಕು, ಅರ್ಧವೇನು, ಬಹುಷ “ಇನ್ನೆಷ್ಟು?” ಎಂದು ಲೆಕ್ಕ ಹಾಕುವ
ದಿನಗಳಲ್ಲಿ ಮೇಲಿನ ಈ ಭಿತ್ತಿಪತ್ರ ಕಂಡಾಗ
ಆದ ಅನುಭೂತಿಯಂತೂ ಅಕ್ಷರಗಳಿಗೆ ನಿಲುಕದ್ದು.
ಕಳುಹಿಸಿ ಕೊಟ್ಟವರು ಕರ್ನಾಟಕ ಕಂಡ ಅತ್ಯಂತ ಮಧುರ, ವಿಶಿಷ್ಠ ಧ್ವನಿಯ ಗಾಯಕಿ ಬಿ.ಕೆ ಸುಮಿತ್ರಾ.

ಐಲೇಸಾ ನಡೆಸಿದ “ಕ್ಯಾಸೆಟ್ ಮ್ಯಾನ್” ಎಂದೇ ಖ್ಯಾತಿಯಾದ ಸಂಗೀತಾ ಲೈವ್ ಕ್ಯಾಸೆಟ್ಸ್ ನ ಮಾಲಕ ಹೆಚ್ ಎಂ ಮಹೇಶ್ ಕಾರ್ಯಕ್ರಮದಿಂದ ರೋಮಾಂಚಿತರಾದ ಬಿ.ಕೆ .ಸುಮಿತ್ರಾ ತನ್ನ ಹಳೆಯ ನೆನಪಿನ ಭಂಡಾರದಿಂದ ಹೊರತೆಗೆದು ಕಳುಹಿಸಿದ ಅಂದಿನ ಒಂದು ಪೋಸ್ಟರ್.

ಅಂದಿನ ದಿನಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದು ಒಂದು ಹರಸಾಹಸ. ಆಗ ಮಂಗಳೂರು ನಗರದಲ್ಲಿ ಇಂತಹ ಕಾರ್ಯಕ್ರಮಗಳನ್ನು ನಡೆಸಿ ಹೆಸರು ಮಾಡಿದವರು ಅಶೋಕ್ ಚರಣ್ ಸಹೋದರರು.
ತುಳು ಚಿತ್ರರಂಗಕ್ಕೆ ಆಕಾಶಗಂಗೆಯಂತಿದ್ದ PB ಶ್ರೀನಿವಾಸ್, S.P. ಬಾಲಸುಬ್ರಮಣ್ಯ, ಎಸ್. ಜಾನಕಿ, ವಾಣಿ ಜಯರಾಂ ಇಂತವರನ್ನು ತುಳುನಾಡಿಗೆ ಕರೆಸಿ ಹಾಡಿಸಿದ ಕೀರ್ತಿ HMM ಅವರಿಗೆ ಸಲ್ಲಬೇಕು.
ಇಂತಹ ದಿನಗಳಲ್ಲಿ ಉದಿಸಿದ ಮತ್ತೊಂದು ಗಾಯನ ತಾರೆ ಬಿ.ಕೆ ಸುಮಿತ್ರಾ.
ಈ ಭಿತ್ತಿ ಚಿತ್ರ ಅಂತಹ ಒಂದು ವೈಭವವನ್ನು ಮರುಕಳಿಸಿದ ನೆನಪಿನ ಬುತ್ತಿ.

“ಭಾಷೆಯನ್ನು ಬೆಳೆಸುವುದು ಬೇಡ, ಬಳಸಿದರೆ ಸಾಕು!” ಎಂದು HSV ಯವರು ಸದಾ ನೆನಪಿಸುತ್ತಿದ್ದ ‌ಮಾತು.
ಈ ಭಿತ್ತಿ ಚಿತ್ರದ ವಿಶೇಷ ಸೂಚನೆಯಲ್ಲಿ
“ತುಳು ಹಾಡುಗಳನ್ನು ಮಾತ್ರ ಹಾಡಲಾಗುವುದು” ಎಂದು ಘೋಷಿಸಿರುವುದು ಅಂದಿನವರ ಭಾಷಾ ಬದ್ಧತೆಗೆ ಸಾಕ್ಷಿ. ಆ ಕಾರಣಕ್ಕಾಗಿಯಾದರೂ ಈ Poster ಎಲ್ಲರೂ ಶೇಖರಿಸಿಡುವುದು ಅಗತ್ಯ.
ಈಗಂತೂ ಹಿಂದಿ ಮತ್ತು ಇತರ ಭಾಷೆಗಳನ್ನೊಳಗೊಂಡ ಸಂಗೀತ ಕಾರ್ಯಕ್ರಮಗಳು ಚರ್ವಿತ ಚರ್ವಣ ಆಗಿರುವುದು ನಮ್ಮ ಭಾಷಾಭಿಮಾನದ ದಿವಾಳಿತನಕ್ಕೆ ಸಾಕ್ಷಿ.
ನಮ್ಮ ಮೂಲ ನೆಲದ ಭಾಷೆಗಳ ಹಾಡುಗಳನ್ನು ಹಾಡುವುದು ತಮ್ಮ ಘನತೆಗೆ ಕಮ್ಮಿ ಎಂದು ತಿಳಿದು ತಪ್ಪು ತಪ್ಪಾಗಿಯಾದರೂ ಹಿಂದಿಯ ಮತ್ತು ಇತರ ಭಾಷೆಯ ಹಾಡುಗಳನ್ನು ಹಾಡುವವರನ್ನು ಕೇಳುವಾಗ ವಿಪರೀತ ಕನಿಕರವಾಗುತ್ತದೆ.

ಅಮೋಘ ನೆನಪನ್ನು ಬಂಗಾರದಂತೆ ಕಾಪಾಡಿಟ್ಟುಕೊಂಡ ನಮ್ಮ ಹೆಮ್ಮೆಯ ಬಿಕೆಸು ಅವರಿಗೆ ಮನದಾಳದ ನಮನ.
ಅವರು ಕನ್ನಡ, ತುಳು ಭಾಷೆಯ ಹಾಡುಗಳಿಗೆ ಅರ್ಪಿಸಿದ ಭಾವಕ್ಕೆ ನಾವೆಲ್ಲ ಸದಾ ನತಮಸ್ತಕರು.

ಶಾಂತಾರಾಮ್ ಶೆಟ್ಟಿ.
ಟೀಂ ಐಲೇಸಾ!