ದುಬೈ ಕರ್ನಾಟಕ ರಾಜ್ಯೋತ್ಸವ-2026 ಸಂಭ್ರಮ

0
3

ದುಬೈ: ಕರ್ನಾಟಕ ಸಂಘ ದುಬೈ ಹಾಗೂ ಕನ್ನಡಿಗರ ಕೂಟ ದುಬೈ ಆಶ್ರಯದಲ್ಲಿ ಅಲ್ ಖಿಸೈಸ್‌ನ ನ್ಯೂ ಡಾನ್ ಪ್ರೈವೇಟ್ ಶಾಲೆಯ ಸಭಾಂಗಣದಲ್ಲಿ ನಡೆದ ದುಬೈ ಕರ್ನಾಟಕ ರಾಜ್ಯೋತ್ಸವ-2026 ಸಂಭ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ದುಬೈಯ ಇಬ್ಬರು ಹಿರಿಯ ಗುರುಗಳಿಗೆ ಪ್ರತಿಷ್ಠಿತ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಯಕ್ಷಗಾನ ಕಲೆಯ ಪ್ರಸಾರ, ಪ್ರಚಾರ ಹಾಗೂ ಮುಂದಿನ ಪೀಳಿಗೆಗೆ ತರಬೇತಿ ನೀಡುವ ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ಕಿನ್ನಿಗೋಳಿಯ ಶೇಖರ್ ಡಿ. ಶೆಟ್ಟಿಗಾರ್ ಮತ್ತು ಉಚ್ಚಿಲದ ಕಿಶೋರ್ ಗಟ್ಟಿ ಅವರು ಪ್ರಶಸ್ತಿಗೆ ಭಾಜನರಾದರು.

ಯುಎಇಯ ಏಕೈಕ ಹಾಗೂ ಪ್ರಪ್ರಥಮ ಸಮಗ್ರ ಯಕ್ಷಗಾನ ಕಲಿಕಾ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇಯ ಯಕ್ಷ ಗುರುಗಳಾದ ಶೇಖರ್ ಡಿ ಶೆಟ್ಟಿಗಾರ್ ಅವರಿಗೆ ‘ಗಿರೀಶ್ ಶೆಟ್ಟಿ ಸೇವಾ ರತ್ನ’ ಪ್ರಶಸ್ತಿಯನ್ನು ಹಾಗೂ ದುಬೈ ಯಕ್ಷಗಾನದ ಮಾತೃ ಸಂಸ್ಥೆಯಾದ ಯಕ್ಷ ಮಿತ್ರರು ದುಬೈಯ ಗುರುಗಳಾದ ಕಿಶೋರ್ ಗಟ್ಟಿ ಉಚ್ಚಿಲರವರಿಗೆ ‘ಮೊಹಮ್ಮದ್ ಸಮೀರ್ ಸೇವಾ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಿ ಅಭಿನಂದಿಸಲಾಯಿತು.

ಈ ಭವ್ಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್,ಖ್ಯಾತ ಅನಿವಾಸಿ ಉದ್ಯಮಿ, ಪೋಷಕ ಡಾ. ರೊನಾಲ್ಡ್ ಕೊಲಾಸೊ,ಖ್ಯಾತ ಉದ್ಯಮಿ ಡಾ. ಬಿ. ಆರ್. ಶೆಟ್ಟಿ, ಖ್ಯಾತ ಕ್ವಿಜ್ ಮಾಸ್ಟರ್ ಹಾಗೂ ಲೇಖಕರಾದ ಡಾ. ನಾ. ಸೋಮೇಶ್ವರ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ,ದುಬೈನ ಆಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್,ಬ್ಲೂ ರೋಯಲ್ ಗ್ರೂಪ್ ಆಫ್ ಕಂಪನಿಯ ಆಡಳಿತ ನಿರ್ದೇಶಕರಾದ ರೊನಾಲ್ಡ್ ಮಾರ್ಟಿಸ್,ಸೈಯೋನ್(SAION) ಪ್ರಾಪರ್ಟೀಸ್, ದುಬೈನ ಸಂಸ್ಥಾಪಕ-ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಕುಮಾರ್ ಅಮರನಾಥ್, ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಪರಮ್ ಶೆಟ್ಟಿ,ದುಬೈ BCF ಅಧ್ಯಕ್ಷ ಡಾ.ಬಿ.ಕೆ.ಯೂಸುಫ್, ಉದ್ಯಮಿ ರಾಮಚಂದ್ರ ಹೆಗ್ಡೆ , ದುಬೈ ಕರ್ನಾಟಕ ಸಂಘ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ,ಕನ್ನಡಿಗರ ಕೂಟ ದುಬೈಯ ಅರುಣ್ ಕುಮಾರ್ ಎಂ.ಕೆ. ಮತ್ತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಖ್ಯಾತ ಅಂತಾರಾಷ್ಟ್ರೀಯ ನಿರೂಪಕಿ ಸವಿ ಪ್ರಕಾಶ್ ಮತ್ತು ಯುಎಇಯ ಖ್ಯಾತ ನಿರೂಪಕಿ ಆರತಿ ಅಡಿಗ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.