ಸಂವಿಧಾನ ದಿನ- ನವೆಂಬರ್ 26

0
37

ಸಂವಿಧಾನ ನಮ್ಮ ದೇಶದ ಅಡಿಪಾಯ, ಪ್ರಜಾಪ್ರಭುತ್ವದ ಜೀವಾಳ – ಡಾ. ಮುರಲೀ ಮೋಹನ್ ಚೂಂತಾರು

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಾಧಾರವಾಗಿರುವ ಸಂವಿಧಾನದ ಮಹತ್ವವನ್ನು ಸ್ಮರಿಸುವ ದಿನವೇ ನವೆಂಬರ್ 26. ಪ್ರತಿವರ್ಷ ಈ ದಿನವನ್ನು ದೇಶಾದ್ಯಂತ ಸಂವಿಧಾನ ದಿನ ಅಥವಾ ರಾಷ್ಟ್ರೀಯ ಕಾನೂನು ದಿನವನ್ನಾಗಿ ಆಚರಿಸಲಾಗುತ್ತದೆ. 1949ರ ನವೆಂಬರ್ 26ರಂದು ಭಾರತದ ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿತು. ಬಳಿಕ 1950ರ ಜನವರಿ 26ರಂದು ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದಿತು. ಈ ಐತಿಹಾಸಿಕ ದಿನದ ಸ್ಮರಣಾರ್ಥ ಜನವರಿ 26ನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.

2015ರಿಂದ ನವೆಂಬರ್ 26ನ್ನು ಅಧಿಕೃತವಾಗಿ ಸಂವಿಧಾನ ದಿನವನ್ನಾಗಿ ಆಚರಿಸುವ ಮೂಲಕ ಜನರಲ್ಲಿ ಸಂವಿಧಾನದ ಮಹತ್ವ, ಆಶಯಗಳು ಹಾಗೂ ಮೂಲಭೂತ ಮೌಲ್ಯಗಳ ಕುರಿತು ಅರಿವು ಮೂಡಿಸುವ ಪ್ರಯತ್ನಕ್ಕೆ ಭಾರತ ಸರಕಾರ ಚಾಲನೆ ನೀಡಿತು. ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು, ಸಮಾನತೆಯ ಆಶಯಗಳು ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ಜನಮಾನಸಕ್ಕೆ ತಲುಪಿಸುವುದೂ ಇದರ ಪ್ರಮುಖ ಉದ್ದೇಶವಾಗಿದೆ.

ಸಂವಿಧಾನ ಎಂದರೇನು?

ಸಂವಿಧಾನವೆಂದರೆ ಒಂದು ರಾಷ್ಟ್ರದ ಆಡಳಿತ ವ್ಯವಸ್ಥೆಯ ಮೂಲ ಕಾನೂನು. ಸರಕಾರದ ರಚನೆ, ವಿವಿಧ ಹಂತಗಳ ಅಧಿಕಾರ ಹಂಚಿಕೆ, ಸರಕಾರದ ಅಧಿಕಾರ ಮತ್ತು ಕರ್ತವ್ಯಗಳು, ಪ್ರಜೆಗಳ ಹಕ್ಕುಗಳು ಹಾಗೂ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವಿವರಿಸುವ ಮೂಲ ದಾಖಲೆಯೇ ಸಂವಿಧಾನ. ಸರಕಾರ ಮತ್ತು ಪ್ರಜೆಗಳ ನಡುವಿನ ಸಂಬಂಧವನ್ನು ನಿಯಂತ್ರಿಸುವ ಮಾರ್ಗದರ್ಶಿ ಚೌಕಟ್ಟೂ ಹೌದು.

ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಭಾಷೆ, ಧರ್ಮ, ಸಂಸ್ಕೃತಿ, ನಂಬಿಕೆ, ಪ್ರಾದೇಶಿಕತೆ, ಬುಡಕಟ್ಟು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಭಿನ್ನತೆಗಳನ್ನು ಮೀರಿ ಎಲ್ಲರಿಗೂ ಸಮಾನತೆಯ ನೆಲೆ ಒದಗಿಸುವ ಮಹತ್ವದ ಶಕ್ತಿಯೇ ನಮ್ಮ ಸಂವಿಧಾನ. ವಿಶ್ವದ ಅತ್ಯಂತ ಸುದೀರ್ಘ ಲಿಖಿತ ಸಂವಿಧಾನಗಳಲ್ಲಿ ಒಂದಾಗಿರುವ ಭಾರತೀಯ ಸಂವಿಧಾನವು ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ಮೂಲಾಧಾರವಾಗಿದೆ.

ಸಂವಿಧಾನ ರಚನೆಯ ಐತಿಹಾಸಿಕ ಹಾದಿ

ಭಾರತದ ಸಂವಿಧಾನ ರಚನಾ ಸಭೆಯ ಮೊದಲ ಸಭೆ 1946ರ ಡಿಸೆಂಬರ್ 9ರಂದು ದೆಹಲಿಯಲ್ಲಿ ನಡೆಯಿತು. ಡಾ. ಬಾಬು ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿಯೂ, ಎಚ್.ಸಿ. ಮುಖರ್ಜಿ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಬಿ.ಎನ್. ರಾವ್ ಅವರು ಸಂವಿಧಾನ ಸಲಹೆಗಾರರಾಗಿದ್ದರು.

ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಡಾ. ಬಿ.ಆರ್. ಅಂಬೇಡ್ಕರ್ ನೇಮಕಗೊಂಡರು. ಹಲವು ಸಮಿತಿಗಳು ಹಾಗೂ ಉಪಸಮಿತಿಗಳ ಪರಿಶ್ರಮದ ಫಲವಾಗಿ ಸಂವಿಧಾನ ರೂಪುಗೊಂಡಿತು. ಸುಮಾರು 2 ವರ್ಷ, 11 ತಿಂಗಳು ಮತ್ತು 18 ದಿನಗಳ ಸುದೀರ್ಘ ಚರ್ಚೆ, ಅಧ್ಯಯನ ಹಾಗೂ ಪರಿಶ್ರಮದ ಬಳಿಕ ಸಂವಿಧಾನ ಸಿದ್ಧವಾಯಿತು.

1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿತು. 299 ಸದಸ್ಯರ ಪೈಕಿ 284 ಸದಸ್ಯರು ಅಂತಿಮ ಪ್ರತಿಗೆ ಸಹಿ ಹಾಕಿದರು. ಮೂಲ ಸಂವಿಧಾನದ ಇಂಗ್ಲಿಷ್ ಪ್ರತಿಯನ್ನು ಪ್ರೇಮ್ ಬಿಹಾರಿ ನಾರಾಯಣ್ ರಾಯ್ಜಾದಾ ಅವರು ಸುಂದರ ಕೈಬರಹದಲ್ಲಿ ಬರೆದಿದ್ದರು. ಮೂಲ ಸಂವಿಧಾನದ ಹಿಂದಿ ಮತ್ತು ಇಂಗ್ಲಿಷ್ ಪ್ರತಿಗಳನ್ನು ಸಂಸತ್ತಿನ ಗ್ರಂಥಾಲಯದಲ್ಲಿ ವಿಶೇಷ ರೀತಿಯಲ್ಲಿ ಸಂರಕ್ಷಿಸಲಾಗಿದೆ.

ಸಂವಿಧಾನದ ಪ್ರಸ್ತಾವನೆ – ಭಾರತದ ಆತ್ಮ

ಭಾರತದ ಸಂವಿಧಾನದ ಮೊದಲ ಪುಟದಲ್ಲಿರುವ ಪ್ರಸ್ತಾವನೆಯು ಇಡೀ ಸಂವಿಧಾನದ ಆಶಯ ಮತ್ತು ತತ್ವಗಳ ಸಾರವನ್ನು ಒಳಗೊಂಡಿದೆ. ‘We, the People of India’ (ಭಾರತದ ಪ್ರಜೆಗಳಾದ ನಾವು) ಎಂಬ ಪದಗಳಿಂದ ಆರಂಭವಾಗುವ ಪ್ರಸ್ತಾವನೆಯು ಭಾರತದ ಸಾರ್ವಭೌಮತ್ವ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ.

ಈ ಮೌಲ್ಯಗಳೇ ಭಾರತೀಯ ಪ್ರಜಾಪ್ರಭುತ್ವದ ಬುನಾದಿ. ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಜೀವನ, ಸಮಾನ ಅವಕಾಶ ಮತ್ತು ನ್ಯಾಯ ದೊರೆಯಬೇಕು ಎಂಬುದು ಸಂವಿಧಾನದ ಮೂಲ ಆಶಯವಾಗಿದೆ.

ಸಂವಿಧಾನ ರಚನೆಯಲ್ಲಿ ಕರ್ನಾಟಕದ ಕೊಡುಗೆ

ಭಾರತದ ಸಂವಿಧಾನ ರಚನೆಯಲ್ಲಿ ಕರ್ನಾಟಕದ ಹಲವು ಗಣ್ಯರು ಮಹತ್ವದ ಪಾತ್ರ ವಹಿಸಿರುವುದು ಹೆಮ್ಮೆಯ ವಿಚಾರ. ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ, ಟಿ. ಚೆನ್ನಯ್ಯ, ಟಿ. ಸಿದ್ದಲಿಂಗಯ್ಯ, ಎಸ್.ವಿ. ಕೃಷ್ಣಮೂರ್ತಿ ಸೇರಿದಂತೆ ಹಲವು ಗಣ್ಯರು ಸಂವಿಧಾನ ರಚನಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಅಂದಿನ ಮದ್ರಾಸ್ ಪ್ರಾಂತ್ಯದ ಭಾಗವಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡೆಯಿಂದ ಬೆನಗಲ್ ನರಸಿಂಹ ರಾವ್, ಉಳ್ಳಾಲ ಶ್ರೀನಿವಾಸ ಮಲ್ಯ, ಎಚ್.ವಿ. ಕಾಮತ್, ಬೆನಗಲ್ ಶಿವರಾವ್ ಹಾಗೂ ಫಾದರ್ ಜೆರೋಮ್ ಡಿ’ಸೋಜಾ ಮುಂತಾದವರು ಸಂವಿಧಾನ ರಚನಾ ಸಭೆಯ ಕಾರ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂಬುದು ಕರಾವಳಿ ಭಾಗದ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ.

ಮೂಲಭೂತ ಹಕ್ಕುಗಳು ಮತ್ತು ಪ್ರಜೆಗಳ ಜವಾಬ್ದಾರಿ

ಭಾರತದ ಸಂವಿಧಾನವು ನಾಗರಿಕರಿಗೆ ಹಲವು ಮೂಲಭೂತ ಹಕ್ಕುಗಳನ್ನು ಒದಗಿಸಿದೆ. ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು ಹಾಗೂ ಸಂವಿಧಾನಾತ್ಮಕ ಪರಿಹಾರಗಳ ಹಕ್ಕುಗಳು ಪ್ರತಿಯೊಬ್ಬ ನಾಗರಿಕನ ಸ್ವಾತಂತ್ರ್ಯ ಮತ್ತು ಗೌರವವನ್ನು ಕಾಪಾಡುವ ಪ್ರಮುಖ ಅಂಶಗಳಾಗಿವೆ.

ಹಕ್ಕುಗಳ ಜೊತೆಗೆ ಪ್ರಜೆಗಳಿಗೆ ಕೆಲವು ಮೂಲಭೂತ ಕರ್ತವ್ಯಗಳನ್ನೂ ಸಂವಿಧಾನ ನೆನಪಿಸುತ್ತದೆ. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗೆ ಗೌರವ ನೀಡುವುದು, ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದು, ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು, ವೈಜ್ಞಾನಿಕ ಮನೋಭಾವ ಬೆಳೆಸುವುದು ಹಾಗೂ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.

ಸಂವಿಧಾನದ ಬದಲಾವಣೆ ಮತ್ತು ಕಾಲೋಚಿತ ಅಗತ್ಯಗಳು

ಮೂಲ ಭಾರತೀಯ ಸಂವಿಧಾನದಲ್ಲಿ 8 ಅನುಸೂಚಿಗಳಿದ್ದವು. ನಂತರದ ಸಾಂವಿಧಾನಿಕ ತಿದ್ದುಪಡಿಗಳ ಮೂಲಕ 9ನೇ, 10ನೇ, 11ನೇ ಹಾಗೂ 12ನೇ ಅನುಸೂಚಿಗಳನ್ನು ಸೇರ್ಪಡೆಗೊಳಿಸಲಾಯಿತು. ಕಾಲದ ಅಗತ್ಯಕ್ಕೆ ಅನುಗುಣವಾಗಿ ಸಂವಿಧಾನದಲ್ಲಿ ಹಲವು ತಿದ್ದುಪಡಿಗಳು ನಡೆದಿವೆ.

ಸಂವಿಧಾನವು ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿರಬೇಕು. ಆದರೆ ಅದರ ಮೂಲ ಆಶಯಗಳಾದ ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಭ್ರಾತೃತ್ವದ ಮೌಲ್ಯಗಳು ಸದಾ ಅಚಲವಾಗಿರಬೇಕು. ಸಂವಿಧಾನವು ನಿಂತ ನೀರಾಗದೆ, ಬದಲಾಗುತ್ತಿರುವ ಸಮಾಜದ ಅಗತ್ಯಗಳಿಗೆ ಸ್ಪಂದಿಸುವ ಜೀವಂತ ದಾಖಲೆಯಾಗಿರಬೇಕು ಎಂಬುದು ಮಹತ್ವದ ಆಶಯವಾಗಿದೆ.

ಕೊನೆಮಾತು

ಸ್ವಾತಂತ್ರ್ಯ ಪಡೆದು ಹಲವು ದಶಕಗಳು ಕಳೆದಿರುವ ಈ ಸಂದರ್ಭದಲ್ಲಿ ನಮ್ಮ ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬ ಭಾರತೀಯನೂ ಅರಿತುಕೊಳ್ಳಬೇಕಾಗಿದೆ. ಸಂವಿಧಾನವು ಕೇವಲ ಕಾನೂನುಗಳ ಪುಸ್ತಕವಲ್ಲ; ಅದು ನಮ್ಮ ಹಕ್ಕುಗಳ ರಕ್ಷಕ, ಪ್ರಜಾಪ್ರಭುತ್ವದ ಮಾರ್ಗದರ್ಶಿ ಮತ್ತು ದೇಶದ ಏಕತೆಯ ಸಂಕೇತ.

ಸಂವಿಧಾನವನ್ನು ಗೌರವಿಸುವುದು ಎಂದರೆ ಅದರ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು. ಜಾತಿ, ಧರ್ಮ, ಭಾಷೆ ಹಾಗೂ ಪ್ರಾದೇಶಿಕ ಭಿನ್ನತೆಗಳನ್ನು ಮೀರಿ ಪರಸ್ಪರ ಗೌರವ, ಸಹಬಾಳ್ವೆ ಮತ್ತು ಸಮಾನತೆಯೊಂದಿಗೆ ಬದುಕುವುದೇ ಸಂವಿಧಾನದ ನಿಜವಾದ ಆಶಯವಾಗಿದೆ.

ನಮ್ಮ ಸಂವಿಧಾನದ ಕುರಿತು ಹೆಚ್ಚಿನ ಅರಿವು ಜನಸಾಮಾನ್ಯರಲ್ಲಿ ಮೂಡಲಿ, ಯುವಜನತೆ ಸಂವಿಧಾನದ ಮೌಲ್ಯಗಳನ್ನು ಅರ್ಥಮಾಡಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲಿ. ಆ ಮೂಲಕ ನಮ್ಮ ಹೆಮ್ಮೆಯ ಭಾರತವು ವಿಶ್ವದ ಮುಂದೆ ಮಾದರಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಲಿ.

ಲೇಖಕರು: ಡಾ. ಮುರಲೀ ಮೋಹನ್ ಚೂಂತಾರು