ಉಡುಪಿ : ನಗರದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ವಾರ್ಷಿಕ ದೀಪೋತ್ಸವವು ನವೆಂಬರ್ 26 ಮತ್ತು 27ರಂದು ಎರಡು ದಿನಗಳ ಕಾಲ ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ವೈಭವದಿಂದ ನಡೆಯಿತು.
ಉತ್ಸವದ ಅಂಗವಾಗಿ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರವನ್ನು ಪ್ರಧಾನ ಅರ್ಚಕ ದಯಾಘನ ಭಟ್ ನೆರವೇರಿಸಿದರು. ಬಳಿಕ ಶ್ರೀ ದೇವರ ಪಲ್ಲಕ್ಕಿ ಉತ್ಸವ, ಧಾತ್ರಿ ವನದಲ್ಲಿ ಮಹಾಪೂಜೆ ಹಾಗೂ ಕಾರ್ತಿಕ ದೀಪೋತ್ಸವದ ಅಂಗವಾಗಿ ವನಭೋಜನ ಮತ್ತು ಕೆರೆ ದೀಪ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

ರಾತ್ರಿ ಪೇಟೆ ಉತ್ಸವದ ಪ್ರಯುಕ್ತ ಶ್ರೀ ದೇವರ ರಜತ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಹೊರಟು ಕೊಳದಪೇಟೆ, ರಥಬೀದಿ ಹಾಗೂ ಬೀಡಿನಗುಡ್ಡೆ ಮಾರ್ಗವಾಗಿ ಸಾಗಿತು. ಉತ್ಸವ ಸಾಗುವ ದಾರಿಯುದ್ದಕ್ಕೂ ವಿವಿಧೆಡೆ ಕಟ್ಟೆ ಪೂಜೆ ನೆರವೇರಿಸಲಾಯಿತು. ಅಲ್ಲದೆ ಆಕರ್ಷಕ ಸುಡುಮದ್ದು ಪ್ರದರ್ಶನವು ಉತ್ಸವದ ಮೆರುಗನ್ನು ಹೆಚ್ಚಿಸಿತು.
ಇಂದು ನಡೆದ ಅವಭೃತೋತ್ಸವದ ಅಂಗವಾಗಿ ಶ್ರೀ ದೇವರ ಪೇಟೆ ಉತ್ಸವದಲ್ಲಿ ಭಕ್ತರು ಸಂಭ್ರಮದಿಂದ ಓಕುಳಿ ಆಟವಾಡಿ ಉತ್ಸವದಲ್ಲಿ ಪಾಲ್ಗೊಂಡರು. ಎರಡು ದಿನಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೂರಾರು ಸಮಾಜ ಬಾಂಧವರು ಭಾಗವಹಿಸಿ ಶ್ರೀ ದೇವರ ದರ್ಶನ ಪಡೆದು ಪುನೀತರಾದರು.
ಈ ಸಂದರ್ಭದಲ್ಲಿ ದೇವಸ್ಥಾನದ ಮುಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ್, ಅರ್ಚಕರಾದ ವಿನಾಯಕ ಭಟ್, ಗಿರೀಶ್ ಭಟ್, ಜಿ.ಎಸ್.ಬಿ. ಯುವಕ ಮಂಡಲದ ಅಧ್ಯಕ್ಷ ನಿತೇಶ್ ಶೆಣೈ, ಸತೀಶ್ ಕಿಣೆ, ವಿಶಾಲ್ ಶೆಣೈ, ನರಹರಿ ಪೈ, ಆಡಳಿತ ಮಂಡಳಿಯ ಸದಸ್ಯರು, ಜಿ.ಎಸ್.ಬಿ. ಯುವಕ ಮಂಡಲ ಹಾಗೂ ಜಿ.ಎಸ್.ಬಿ. ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

