ಮರಾಠಿ ಸಮುದಾಯದ ಸಮ್ಮೇಳನದಲ್ಲಿ ತುಳು ಲಿಪಿಯ ಕಂಪು: ‘ಬಲೆ ತುಳು ಲಿಪಿಟ್ ಪುದರ್ ಬರೆಕ’ ಅಭಿಯಾನಕ್ಕೆ ಉತ್ತಮ ಸ್ಪಂದನೆ

0
8

ಬೆಂಗಳೂರು: ತುಳು ಭಾಷೆ ಮತ್ತು ಲಿಪಿಯ ಮೇಲಿನ ಅಭಿಮಾನವನ್ನು ಬೆಳೆಸುವ ಉದ್ದೇಶದಿಂದ ಜೈ ತುಳುನಾಡ್ (ರಿ.) ಸಂಘಟನೆಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ‘ಬಲೆ ತುಳು ಲಿಪಿಟ್ ಪುದರ್ ಬರೆಕ’ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ನ. 22ರಂದು ಬೆಂಗಳೂರಿನ ವಿಜಯ ಬಂಟರ ಸಂಘ ನಗರ ಭವನದಲ್ಲಿ ಕರ್ನಾಟಕ ಮರಾಠಿ ಸಂಘ (ರಿ.) ವತಿಯಿಂದ ಆಯೋಜಿಸಲಾಗಿದ್ದ ‘ಪಶ್ಚಿಮ ಘಟ್ಟಗಳ ಮರಾಠಿ ಬುಡಕಟ್ಟು ಸಮ್ಮೇಳನ’ದಲ್ಲಿ ಈ ವಿಶೇಷ ಅಭಿಯಾನ ನಡೆಯಿತು. ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಡೆದ ಅಭಿಯಾನದಲ್ಲಿ ಸಮ್ಮೇಳನಕ್ಕೆ ಆಗಮಿಸಿದವರು ತಮ್ಮ ಹೆಸರುಗಳನ್ನು ತುಳು ಲಿಪಿಯಲ್ಲಿ ಬರೆಸಿಕೊಳ್ಳುವ ಮೂಲಕ ತುಳು ಭಾಷೆ ಹಾಗೂ ಲಿಪಿಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು.

ಕುಂದಾಪುರ, ಉಡುಪಿ, ಮಂಗಳೂರು, ಕಾಸರಗೋಡು ಮತ್ತು ಕೊಡಗು ಭಾಗಗಳ ಮರಾಠಿ ಸಮುದಾಯದವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಈ ಸಮ್ಮೇಳನ ಆಯೋಜಿಸಲಾಗಿತ್ತು. ತುಳುನಾಡಿನ ಮರಾಠಿ ಸಮುದಾಯವು ತುಳುವನ್ನು ತಮ್ಮ ಮಾತೃಭಾಷೆಯಾಗಿ ಗೌರವಿಸುತ್ತಿರುವ ಹಿನ್ನೆಲೆಯಲ್ಲಿ, ಅವರಲ್ಲಿ ತುಳು ಲಿಪಿಯ ಪರಿಚಯ ಮತ್ತು ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಅಭಿಯಾನದ ಅಂಗವಾಗಿ ತುಳು ಲಿಪಿಯಲ್ಲಿ ತಮ್ಮ ಹೆಸರು ಬರೆಸಿದವರು ಆ ಚೀಟಿಗಳನ್ನು ಪೆಟ್ಟಿಗೆಯಲ್ಲಿ ಹಾಕುವ ಮೂಲಕ ಲಕ್ಕಿ ಡ್ರಾದಲ್ಲಿಯೂ ಭಾಗವಹಿಸಿದರು. ಈ ಅದೃಷ್ಟ ಆಯ್ಕೆಯಲ್ಲಿ ನಿತೇಶ್ ಕುಮಾರ್ ವಿಜೇತರಾದರು.

ಬೆಂಗಳೂರಿನಂತಹ ಮಹಾನಗರದಲ್ಲಿ ತುಳು ಭಾಷೆ ಮತ್ತು ಸಂಸ್ಕೃತಿಯ ಪ್ರಚಾರ ಕಾರ್ಯಗಳನ್ನು ನಿರಂತರವಾಗಿ ನಡೆಸುವುದು ಸವಾಲಿನ ಕೆಲಸವಾಗಿದ್ದರೂ, ಸಂಘಟನೆಯ ಸದಸ್ಯರ ಒಗ್ಗಟ್ಟು ಹಾಗೂ ಪರಿಶ್ರಮದಿಂದ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿವೆ. ಜೈ ತುಳುನಾಡ್ (ರಿ.) ಸಂಘಟನೆಯು ಕಳೆದ 10ರಿಂದ 12 ವರ್ಷಗಳಿಂದ ತುಳುನಾಡಿನ ಭಾಷೆ, ಲಿಪಿ ಮತ್ತು ಸಂಸ್ಕೃತಿಯನ್ನು ತುಳುವರು ಮಾತ್ರವಲ್ಲದೆ ಜಗತ್ತಿನ ಇತರ ಸಮುದಾಯಗಳಿಗೂ ಪರಿಚಯಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ.

ಕಾರ್ಯಕ್ರಮದಲ್ಲಿ ಜೈ ತುಳುನಾಡ್ (ರಿ.) ಸಂಘಟನೆಯ ಸಂಸ್ಥಾಪಕ ಯತೀಶ್ ಮುಂಡೋಡಿ, ಜೈ ತುಳುನಾಡ್ ಬೆಂಗಳೂರು (ರಿ.) ಘಟಕದ ಸಂಸ್ಥಾಪಕ ಶರತ್ ಕೊಡವೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರದೀಪ್ ಶೆಟ್ಟಿ, ಪ್ರದೀಪ್ ಪ್ರದೇಶ್, ಅಧ್ಯಕ್ಷ ಶುಭಕರ ನಾಯ್ಕ್ ಹಾಗೂ ಬೆಂಗಳೂರು ತುಳು ಲಿಪಿ ಸಮಿತಿಯ ಸಂಸ್ಥಾಪಕ ಅನುದೀಪ್ ಶೆಟ್ಟಿ ಉಪಸ್ಥಿತರಿದ್ದರು.