ಯಕ್ಷಾಂಗಣದಿಂದ ಪಿ.ರಮಾನಾಥ ಹೆಗ್ಡೆ ಸಂಸ್ಮರಣೆ – ತಾಳಮದ್ದಳೆ

0
5

ರಮಾನಾಥ ಹೆಗ್ಡೆಯವರದು ಮಾದರಿ ವ್ಯಕ್ತಿತ್ವ: ರಾಘವೇಂದ್ರ ಶಾಸ್ತ್ರಿ

ಮಂಗಳೂರು : ‘ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಮ್ಮ ಜೀವನದಲ್ಲಿ ಶುಚಿ – ರುಚಿಯನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ವರ್ಗೀಯ ಪಳ್ಳಿ ರಮಾನಾಥ ಹೆಗ್ಡೆಯವರದು ಮಾದರಿ ವ್ಯಕ್ತಿತ್ವ. ಶ್ರೀ ಮಂಗಳಾದೇವಿ ದೇವಸ್ಥಾನದ ಅಭಿವೃದ್ಧಿಯ ಕೆಲಸಗಳನ್ನು ಅತ್ಯಂತ ಸೇವಾ ಮನೋಭಾವದಿಂದ ನಿರ್ವಹಿಸಿ, ವಿವಿಧ ಧಾರ್ಮಿಕ – ಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಿ ಜನಪ್ರಿಯರಾಗಿದ್ದ ಅವರು ಚಿರಸ್ಮರಣೀಯರು’ ಎಂದು ಶರವು ಶ್ರೀ ಶರಭೇಶ್ವರ ಮಹಾ ಗಣಪತಿ ದೇವಸ್ಥಾನದ ಶಿಲೆ ಶಿಲೆ ಆಡಳಿತ ಮೊಕ್ತೇಸರ ಮತ್ತು ಪ್ರಧಾನ ಅರ್ಚಕರಾದ ಶರವು ರಾಘವೇಂದ್ರ ಶಾಸ್ತ್ರಿ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯದ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನವೆಂಬರ್ 22 ರಿಂದ ಆರಂಭಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ 14ನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ಚತುರ್ದಶ ಸರಣಿ ಅಂಗವಾಗಿ ಸಪ್ತಾಹದ ಮೂರನೇ ದಿನ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ದಿ| ಪಳ್ಳಿ ರಮಾನಾಥ ಹೆಗ್ಡೆಯವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣ ಜ್ಯೋತಿ ಬೆಳಗಿ ಮಾತನಾಡಿದರು. ಕದ್ರಿ ಶ್ರೀಕೃಷ್ಣ ಯಕ್ಷ ಸಭಾದ ಸಂಚಾಲಕ ಮತ್ತು ಧಾರ್ಮಿಕ ಸಂಘಟಕ ಸುಧಾಕರ ರಾವ್ ಪೇಜಾವರ ನುಡಿ ನಮನ ಸಲ್ಲಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸೌಂದರ್ಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸೌಂದರ್ಯ ರಮೇಶ್ ಮತ್ತು ಕಾವೂರು ಬಂಟರ ಸಂಘದ ಅಧ್ಯಕ್ಷ ,ಉದ್ಯಮಿ ಆನಂದ ಶೆಟ್ಟಿ ಅವರು ಮಾತನಾಡಿ ಯಕ್ಷಾಂಗಣದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು; ತಾಳಮದ್ದಳೆಯ ಕಾರ್ಯಕ್ರಮದೊಂದಿಗೆ ಗತಿಸಿ ಹೋದ ಹಿರಿಯರನ್ನು ಸ್ಮರಿಸುವ ಕಾರ್ಯ ಸ್ತುತ್ಯ ಎಂದು ಶುಭ ಹಾರೈಸಿದರು. ದಿ| ರಮಾನಾಥ ಹೆಗಡೆಯವರ ಧರ್ಮಪತ್ನಿ ವನಿಲಾ ಆರ್. ಹೆಗ್ಡೆ ಹಾಗೂ ನಿಕಟ ಬಂಧು ಸುಜಾತ ವಿ. ಶೆಟ್ಟಿ ವೇದಿಕೆಯಲ್ಲಿದ್ದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಹಾಸ್ ಆಚಾರ್ಯ ಪ್ರಾರ್ಥನೆ ನೆರವೇರಿಸಿದರು. ಪ್ರಧಾನ ಸಂಚಾಲಕ ರವೀಂದ್ರ ರೈ ಕಲ್ಲಿಮಾರು ಕಾರ್ಯಕ್ರಮ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ವಂದಿಸಿದರು. ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ ಮತ್ತು ಕಾರ್ಯದರ್ಶಿ ಲಕ್ಷ್ಮಿನಾರಾಯಣ ರೈ ಹರೇಕಳ ಅತಿಥಿಗಳನ್ನು ಗೌರವಿಸಿದರು.

‘ಭಾರ್ಗವ ರಾಮ’ ತಾಳಮದ್ದಳೆ

ಸಪ್ತಾಹದ ಮೂರನೇಯ ಆಖ್ಯಾನವಾಗಿ ಶ್ರೀ ವಾಣಿವಿಲಾಸ ಯಕ್ಷಗಾನ ಬಳಗ ಶಿರಂಕಲ್ಲು ಕಟೀಲು ಇವರ ಸಂಯೋಜನೆಯಲ್ಲಿ ‘ಭಾರ್ಗವ ರಾಮ’ ಯಕ್ಷಗಾನ ತಾಳಮದ್ದಳೆ ಜರಗಿತು. ರವಿಕೃಷ್ಣ ದಂಬೆ ಅವರ ಭಾಗವತಿಕೆಗೆ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಅವಿನಾಶ್ ಬೈಪಾಡಿತ್ತಾಯ ಚೆಂಡೆ – ಮದ್ದಳೆ ನುಡಿಸಿದರು. ರಾಧಾಕೃಷ್ಣ ಕಲ್ಚಾರ್, ವಿನಯ ಆಚಾರ್ಯ ಹೊಸಬೆಟ್ಟು, ಪಶುಪತಿ ಶಾಸ್ತ್ರಿ ಶಿರಂಕಲ್ಲು ಮತ್ತು ಉಮೇಶ ನೀಲಾವರ ಅರ್ಥಧಾರಿಗಳಾಗಿದ್ದರು.