ಕೊಕ್ರಾಡಿ: ಕೊಕ್ರಾಡಿ–ಕುತ್ಲೂರು ಸಂಪರ್ಕ ರಸ್ತೆಯ ಅತ್ರಿಜಾಲು ಎಂಬಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸೇತುವೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಹರೀಶ್ ಪೂಂಜ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯ ಜನರಿಗೆ ಸಂಚಾರದ ಅನುಕೂಲತೆ ಹೆಚ್ಚಲಿದ್ದು, ಕೊಕ್ರಾಡಿ ಮತ್ತು ಕುತ್ಲೂರು ಗ್ರಾಮಗಳ ನಡುವಿನ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ. ಮಳೆಗಾಲದಲ್ಲಿ ಎದುರಾಗುವ ಸಂಚಾರದ ಸಮಸ್ಯೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಸೇತುವೆ ನಿರ್ಮಾಣ ಮಹತ್ವದ್ದಾಗಿದೆ.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಪಾರೆಂಕಿ, ಮಂಡಲ ಉಪಾಧ್ಯಕ್ಷರಾದ ಮೋಹನ್ ಅಂಡಿಂಜೆ, ನಾರಾವಿ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅಭಿಜಿತ್ ಜೈನ್, ಕೊಕ್ರಾಡಿ ಶಕ್ತಿಕೇಂದ್ರ ಅಧ್ಯಕ್ಷ ಜಗದೀಶ್ ಹೆಗ್ಡೆ, ಮಾಜಿ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

