ಪಣೋಲಿಬೈಲು: ರೂ 2 ಕೋಟಿ ವೆಚ್ಚದ ನೂತನ ಅನ್ನಛತ್ರ ಲೋಕಾರ್ಪಣೆ

0
4

ಭಕ್ತರ ದೇಣಿಗೆ ಸದುಪಯೋಗ: ಮಾಣಿಲ ಶ್ರೀ

ಬಂಟ್ವಾಳ : ಜಿಲ್ಲೆಯ ಕಾರಣಿಕ ಕ್ಷೇತ್ರವಾಗಿ ಗುರುತಿಸಿಕೊಂಡ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಬರುವ ಸಾವಿರಾರು ಮಂದಿ ಭಕ್ತರಿಗೆ ಅನುಕೂಲವಾಗುವಂತೆ ನಿರ್ಮಿಸಲಾದ ರೂ 2 ಕೋಟಿ ವೆಚ್ಚದ ನೂತನ ಅನ್ನಛತ್ರ ಕಟ್ಟಡದ ಮೂಲಕ ಭಕ್ತರ ದೇಣಿಗೆ ಸದುಪಯೋಗವಾಗಿದೆ ಎಂದು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ.

ಇಲ್ಲಿನ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ರೂ 2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಅನ್ನಛತ್ರ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಆರೋಗ್ಯ ಸಚಿವ ಯು.ಟಿ. ಖಾದರ್ ಮಾತನಾಡಿ, ‘ಇತಿಹಾಸ ಪ್ರಸಿದ್ಧ ಪಣೋಲಿಬೈಲು ಕ್ಷೇತ್ರದಲ್ಲಿ ನೂತನ ಅನ್ನಛತ್ರ ನಿರ್ಮಾಣಗೊಂಡು ಕ್ಷೇತ್ರಕ್ಕೆ ಬರುವ ಅಪಾರ ಮಂದಿ ಭಕ್ತರಿಗೆ ಅನುಕೂಲಕರವಾಗಿದೆ’ ಎಂದರು.

ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ಗರಿಷ್ಟ ಆದಾಯ ತರುವ ‘ಎ’ ದರ್ಜೆ ಧಾರ್ಮಿಕ ಕ್ಷೇತ್ರವಾಗಿ ಭಕ್ತರ ಗಮನ ಸೆಳೆದಿದೆ’ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ‘ಪಣೋಲಿಬೈಲು ಕಾರಣಿಕದ ಕಲ್ಲುರ್ಟಿ ಕ್ಷೇತ್ರಕ್ಕೆ ಎಲ್ಲಾ ಧರ್ಮೀಯರು ಬಂದು ನೆಮ್ಮದಿ ಕಂಡುಕೊಳ್ಳುವ ಪುಣ್ಯ ಕ್ಷೇತ್ರವಾಗಿದೆ’ ಎಂದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಎಸ್.ಗಟ್ಟಿ, ತಹಶೀಲ್ದಾರ್ ಜಿ.ಮಂಜುನಾಥ್ ಶುಭ ಹಾರೈಸಿದರು. ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಬೂಡ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಪ್ರಮುಖರಾದ ರವೀಂದ್ರನಾಥ ಭಂಡಾರಿ ಮುಂಬೈ, ರೋಹಿತ್ ಶೆಟ್ಟಿ ನಗ್ರಿಗುತ್ತು, ಕೆ.ಪದ್ಮನಾಭ ರೈ, ರಮೇಶ ಕುಲಾಲ್ ಪಣೋಲಿಬೈಲು, ಕೆ.ಸಂಜೀವ ಪೂಜಾರಿ ಮೆಲ್ಕಾರ್, ಶೋಭಿತ್ ಪೂಂಜ, ಶ್ರೀಕಾಂತ್ ಶೆಟ್ಟಿ, ಮತ್ತಿತರರು ಇದ್ದರು.

ಉದ್ಯಮಿ ನಗ್ರಿಗುತ್ತು ವಿವೇಕ್ ಶೆಟ್ಟಿ ಸ್ವಾಗತಿಸಿ, ಗಿರೀಶ್ ಪೂಜಾರಿ ಪೆರ್ವ ವಂದಿಸಿದರು. ಶಿವಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.