ಮಧುಮೇಹ ಜಾಗೃತಿ ಕಾರ್ಯಕ್ರಮ

0
8

ಲಯನ್ಸ್ ಕ್ಲಬ್ ಆಫ್ ಮಂಗಳೂರು ಸೋಮೇಶ್ವರ ವತಿಯಿಂದ ಸೋಮೇಶ್ವರ ಉಚ್ಚಿಲದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಜೀವನಶೈಲಿ ಸಂಬಂಧಿತ ಕಾಯಿಲೆಗಳು, ವಿಶೇಷವಾಗಿ ಮಧುಮೇಹ ಮತ್ತು ಅದರ ತಡೆಗಟ್ಟುವಿಕೆ ಕುರಿತು ಸಂವಾದಾತ್ಮಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕಿ ಚಂಚಲಾಕ್ಷಿ ಅವರು ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಲಯನ್ ವಿಜಯನ್ ಕೆ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಖ್ಯಾತ ಯೋಗ ಸಾಧಕರೂ, ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್ ಲಯನ್ ಕೆ. ವಿಜಯಕುಮಾರ್ ಅವರು ಜಾಗೃತಿ ಉಪನ್ಯಾಸ ನೀಡಿದರು. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಯೋಗ ಹಾಗೂ ಶಿಸ್ತುಬದ್ಧ ಜೀವನಶೈಲಿಯ ಮೂಲಕ ಮಧುಮೇಹವನ್ನು ತಡೆಗಟ್ಟುವ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ನಿರಂತರ ಮಧುಮೇಹ ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲೆಗೆ ಸಕ್ಕರೆ ಕಾಯಿಲೆ ಜಾಗೃತಿ ಫಲಕವನ್ನು ಕ್ಲಬ್ ವತಿಯಿಂದ ಕೊಡುಗೆಯಾಗಿ ನೀಡಲಾಯಿತು.

ಲಯನ್ ಫ್ಲಾವಿಯಾ ಡಿಸೋಜಾ ಅವರು ಸ್ವಾಗತಿಸಿದರು. ಶಾಲಾ ಶಿಕ್ಷಕಿ ಸುಧಾ ಅವರು ವಂದನಾರ್ಪಣೆ ಮಾಡಿದರು.

ವಿದ್ಯಾರ್ಥಿಗಳು ಬಾಲ್ಯದಿಂದಲೇ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವಂತೆ ಪ್ರೇರೇಪಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.