ಟಿ-ಶರ್ಟ್ ಆಸೆಗೆ ಬಿದ್ದ ಯುವಕನಿಗೆ ₹1.6 ಲಕ್ಷ ಪಂಗನಾಮ! ಐಫೋನ್ ಆಮಿಷವೊಡ್ಡಿ ಸೈಬರ್ ವಂಚನೆ

0
11

ಮಂಗಳೂರು : ಆನ್‌ಲೈನ್‌ನಲ್ಲಿ ಟಿ-ಶರ್ಟ್ ಖರೀದಿಸಿದರೆ ಉಚಿತವಾಗಿ ಐಫೋನ್ ನೀಡುವುದಾಗಿ ಜಾಹೀರಾತು ನೀಡಿ ಯುವಕನೊಬ್ಬನಿಗೆ ಬರೋಬ್ಬರಿ 1.6 ಲಕ್ಷ ರೂ. ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಸೈಬರ್ ವಂಚಕರ ವಿರುದ್ಧ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

25 ವರ್ಷದ ಯುವಕನಿಗೆ ಅಕ್ಟೋಬರ್ 31ರಂದು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಟಿ-ಶರ್ಟ್ ಖರೀದಿಸಿದರೆ ಉಡುಗೊರೆಯಾಗಿ ಐಫೋನ್ ನೀಡುವುದಾಗಿ ಜಾಹೀರಾತು ಕಾಣಿಸಿಕೊಂಡಿತ್ತು. ಇದನ್ನು ನಂಬಿದ ಯುವಕ ಟಿ-ಶರ್ಟ್ ಆರ್ಡರ್ ಮಾಡಿ ಡಿಜಿಟಲ್ ಪಾವತಿ ಆ್ಯಪ್ ಮೂಲಕ 734 ರೂ. ಪಾವತಿಸಿದ್ದ.

ಅದೇ ದಿನ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಟಿ-ಶರ್ಟ್ ಜೊತೆಗೆ ಐಫೋನ್ ಕೂಡ ರವಾನೆಯಾಗಲಿದೆ. ಆದರೆ ಐಫೋನ್‌ಗೆ ವಿಮಾ ಮೊತ್ತ ಪಾವತಿಸಬೇಕು. ಬಳಿಕ ಆ ಹಣವನ್ನು ಹಿಂದಿರುಗಿಸಲಾಗುವುದು ಎಂದು ತಿಳಿಸಿದ್ದಾನೆ. ಆತನ ಮಾತನ್ನು ನಂಬಿದ ಯುವಕ ಎರಡು ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 72,640 ರೂ. ವರ್ಗಾಯಿಸಿದ್ದಾನೆ.

ನಂತರ ನವೆಂಬರ್ 22ರಂದು ಮತ್ತೊಬ್ಬ ವ್ಯಕ್ತಿ ಕರೆ ಮಾಡಿ 71,906 ರೂ. ವರ್ಗಾಯಿಸುವಂತೆ ಸೂಚಿಸಿದ್ದು, ಈ ಹಣವನ್ನೂ ಮರುಪಾವತಿಸುವುದಾಗಿ ಭರವಸೆ ನೀಡಿದ್ದಾನೆ. ಇದನ್ನೂ ನಂಬಿದ ಯುವಕ ಹಣ ಪಾವತಿಸಿದ್ದಾನೆ.

ಇಷ್ಟಕ್ಕೆ ನಿಲ್ಲದ ವಂಚಕರು ಹಣ ಮರುಪಾವತಿ ಪ್ರಕ್ರಿಯೆಗಾಗಿ IMPS ಮೂಲಕ ಕಮಿಷನ್ ಶುಲ್ಕವಾಗಿ ಮತ್ತೆ 20,856 ರೂ. ಪಾವತಿಸುವಂತೆ ಒತ್ತಾಯಿಸಿದ್ದಾರೆ. ಅದರಂತೆ ಯುವಕ UPI ಐಡಿಗೆ ಹಣ ವರ್ಗಾಯಿಸಿದ್ದಾನೆ. ಆದರೆ ಈವರೆಗೆ ಯಾವುದೇ ಹಣ ಆತನ ಖಾತೆಗೆ ಮರಳಿರಲಿಲ್ಲ.

ಕರೆ ಮಾಡಿದವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಸಮರ್ಪಕ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ತಾನು ಸೈಬರ್ ವಂಚನೆಗೆ ಒಳಗಾಗಿರುವುದನ್ನು ಅರಿತ ಯುವಕ ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾನೆ.

ಉಚಿತ ಉಡುಗೊರೆಗಳ ಆಮಿಷಕ್ಕೆ ಒಳಗಾಗಿ ಅಪರಿಚಿತರಿಗೆ ಹಣ ವರ್ಗಾಯಿಸುವ ಮುನ್ನ ಎಚ್ಚರಿಕೆ ವಹಿಸಬೇಕು. ವಿಮೆ, ಕಮಿಷನ್ ಅಥವಾ ಹಣ ಮರುಪಾವತಿ ಹೆಸರಿನಲ್ಲಿ ಹೆಚ್ಚುವರಿ ಹಣ ಕೇಳುವ ಆನ್‌ಲೈನ್ ವಂಚಕರ ಬಗ್ಗೆ ಸಾರ್ವಜನಿಕರು ಜಾಗರೂಕರಾಗಿರಬೇಕು.