ಗೋವಾದಲ್ಲಿ ನ.29ರಂದು ತುಳುಕೂಟ ಮತ್ತು ತುಳುವ ಮಹಾಸಭಾದ ವಾರ್ಷಿಕ ಉಚ್ಚಯ 2026

0
11

ಗೋವಾ: ತುಳುಕೂಟ (ರಿ.) ಗೋವಾ ಹಾಗೂ ತುಳುವ ಮಹಾಸಭಾದ ಜಂಟಿ ಆಶ್ರಯದಲ್ಲಿ ವಾರ್ಷಿಕ ಉಚ್ಚಯ 2026 ಕಾರ್ಯಕ್ರಮವು ನವೆಂಬರ್ 29ರಂದು ಗೋವಾದ ಪೋರ್ವೊರಿಮ್‌ನ ಪುಂಡಲಿಕ ದೇವಸ್ಥಾನದ ಸಭಾಗೃಹದಲ್ಲಿ ನಡೆಯಲಿದೆ. ತುಳು ಸಂಸ್ಕೃತಿ, ಕಲೆ, ಸಾಹಿತ್ಯ ಹಾಗೂ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮವನ್ನು ಅಖಿಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಉದ್ಘಾಟಿಸಲಿದ್ದು, ತುಳುಕೂಟ ಗೋವಾದ ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ತುಳುವ ಮಹಾಸಭಾದ ಅಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ಗೌರವ ಉಪಸ್ಥಿತಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮುಂಬಯಿ ಉದ್ಯಮಿ ಮಹೇಶ್ ಶೆಟ್ಟಿ ತೆಳ್ಳಾರ್ ಹಾಗೂ ಅಬುಧಾಬಿ ತುಳು ಮಹಾಸಭಾದ ಪ್ರಮುಖ ಸರ್ವೋತ್ತಮ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಡಾ. ರಾಜೇಶ್ ಕೃಷ್ಣ ಆಳ್ವ, ತುಳು ಚಲನಚಿತ್ರ ನಟರಾದ ಭೋಜರಾಜ್ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಗೋವಾ ಬಂಟರ ಸಂಘದ ಶಶಿಧರ್ ರೈ, ಗೋವಾ ಬಿಲ್ಲವರ ಸಂಘದ ಅಧ್ಯಕ್ಷ ಕೃಷ್ಣ ಪೂಜಾರಿ, ಗೋವಾ ನಾರಾಯಣ ಗುರು ಟ್ರಸ್ಟ್‌ನ ಅಧ್ಯಕ್ಷ ಪ್ರಕಾಶ್ ಪೂಜಾರಿ, ತುಳುಕೂಟ ಗೋವಾದ ಗೌರವಾನ್ವಿತ ಪ್ರಮುಖರಾದ ಸದಾನಂದ ಶೆಟ್ಟಿ ಬೆಳುವಾಯಿ, ಚಂದ್ರಹಾಸ ಅಮೀನ್ ಹಾಗೂ ವಿಜಯೇಂದ್ರ ಶೆಟ್ಟಿ ಕಬಿಯಾಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಗೋವಾದ ತುಳುವರ ವತಿಯಿಂದ ನಿತೇಶ್ ಶೆಟ್ಟಿ ಎಕ್ಕಾರ್ ಅವರಿಗೆ ಪ್ರತಿಷ್ಠಿತ ‘ಸ್ವರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ತುಳು ಚಲನಚಿತ್ರ ನಟ ಹಾಗೂ ನವರಸ ರಾಜ ಎಂದೇ ಗುರುತಿಸಿಕೊಂಡಿರುವ ಭೋಜರಾಜ್ ವಾಮಂಜೂರು ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.

ನವೆಂಬರ್ 29ರಂದು ಮಧ್ಯಾಹ್ನ 2.30ರಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಹಾಸ್ಯ, ಗಾಯನ, ನೃತ್ಯ ಮತ್ತು ನಾಟಕ ಪ್ರದರ್ಶನಗಳೊಂದಿಗೆ ಬೈಲೂರು ಹಾಗೂ ಮಾಣಿಬೆಟ್ಟು ತಂಡಗಳಿಂದ ಉಚ್ಚಿಲ ಪ್ರದರ್ಶನ, ಕಾಮಿಡಿ ಶೋ ಹಾಗೂ ಚೈತನ್ಯ ಕಲಾವಿದರು ಬೈಲೂರು ಇವರಿಂದ ವಿಶೇಷ ಮನರಂಜನ ನಾಟಕ ಪ್ರೇಕ್ಷಕರನ್ನು ರಂಜಿಸಲಿವೆ.

ಕಾರ್ಯಕ್ರಮದ ನಿರೂಪಣೆಯನ್ನು ನಿತೇಶ್ ಶೆಟ್ಟಿ ವಹಿಸಲಿದ್ದಾರೆ. ಗೋವಾದಲ್ಲಿ ನೆಲೆಸಿರುವ ತುಳುವರನ್ನು ಒಗ್ಗೂಡಿಸುವುದರೊಂದಿಗೆ ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರ ಮತ್ತು ಕಲಾಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ವಾರ್ಷಿಕ ಉಚ್ಚಯ ಮಹತ್ವ ಪಡೆದುಕೊಂಡಿದೆ.