ಮನೆಯಲ್ಲಿ ನಡೆಯುತ್ತಿದ್ದ ಕೌಟುಂಬಿಕ ಜಗಳದಿಂದ ಬೇಸತ್ತ ಇಬ್ಬರು ಸಹೋದರರು ತಮ್ಮ ಸ್ವಂತ ಪತ್ನಿಯರನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು, ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹಗಳನ್ನು ಆಂಬ್ಯುಲೆನ್ಸ್ನಲ್ಲಿ ಸಾಗಿಸಿ ದಟ್ಟ ಕಾಡಿನಲ್ಲಿ ಹೂತುಹಾಕಿರುವ ಭೀಕರ ಘಟನೆ ಜಾರ್ಖಂಡ್ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಶಿವಶಂಕರ್ ಸಾಹು ಮತ್ತು ಆತನ ಸಹೋದರ ನವೀನ್ ಸಾಹು ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಿವಶಂಕರ್ ಪತ್ನಿ ಮಿನಿ ಪ್ರಿಯಾ (28) ಹಾಗೂ ನವೀನ್ ಪತ್ನಿ ರಾಧಿಕಾ ಕುಮಾರಿ (20) ಕೊಲೆಯಾದ ದುರ್ದೈವಿಗಳು. ಶಿವಶಂಕರ್ ಆಂಬ್ಯುಲೆನ್ಸ್ ಚಾಲಕನಾಗಿದ್ದ ಎಂದು ತಿಳಿದುಬಂದಿದೆ.
ಕಳೆದ ಸೋಮವಾರ ಸಹೋದರರಿಬ್ಬರು ಸೇರಿಕೊಂಡು ತಮ್ಮ ಪತ್ನಿಯರನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾರೆ. ಬಳಿಕ ಯಾರಿಗೂ ಅನುಮಾನ ಬಾರದಂತೆ ಮೃತದೇಹಗಳನ್ನು ಆಂಬ್ಯುಲೆನ್ಸ್ನಲ್ಲಿ ಸಾಗಿಸಿ, ಪಕ್ಕದ ಸಿಮ್ಡೆಗಾ ಜಿಲ್ಲೆಯ ದಟ್ಟ ಕಾಡಿನಲ್ಲಿ ಗುಂಡಿ ತೋಡಿ ಹೂತುಹಾಕಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಇಬ್ಬರು ಮಹಿಳೆಯರ ನಡುವೆ ಕಳೆದ ಹಲವು ದಿನಗಳಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಇದರಿಂದ ಅಣ್ಣ-ತಮ್ಮಂದಿರಿಬ್ಬರೂ ಅಸಮಾಧಾನಗೊಂಡಿದ್ದರು. ಆದರೆ, ವಿಪರ್ಯಾಸವೆಂದರೆ ಕೊಲೆ ನಡೆಯುವುದಕ್ಕೆ ಕೇವಲ ಎರಡು ದಿನಗಳ ಹಿಂದಷ್ಟೇ ಇಬ್ಬರು ಮಹಿಳೆಯರು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು ರಾಜಿಯಾಗಿದ್ದರು ಎನ್ನಲಾಗಿದೆ.
ಹತ್ಯೆ ನಡೆಸಿದ ಮರುದಿನವೇ ಆರೋಪಿಗಳು ಪೊಲೀಸ್ ಠಾಣೆಗೆ ತೆರಳಿ, ತಮ್ಮ ಪತ್ನಿಯರು ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿದ್ದಾರೆ ಎಂದು ನಾಪತ್ತೆ ದೂರು ದಾಖಲಿಸಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಆದರೆ, ಆರೋಪಿಗಳ ವರ್ತನೆಯ ಮೇಲೆ ಅನುಮಾನಗೊಂಡ ಪೊಲೀಸರು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಸಿಮ್ಡೆಗಾ ಜಿಲ್ಲೆಯ ಕಾಡಿನಲ್ಲಿ ಶೋಧ ನಡೆಸಿದ ಪೊಲೀಸರು ಹೂತುಹಾಕಲಾಗಿದ್ದ ಇಬ್ಬರು ಮಹಿಳೆಯರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕೊಡಲಿ ಹಾಗೂ ಮೃತದೇಹಗಳನ್ನು ಸಾಗಿಸಲು ಬಳಸಿದ್ದ ಆಂಬ್ಯುಲೆನ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.
ಘಟನೆ ಜಾರ್ಖಂಡ್ನಲ್ಲಿ ತೀವ್ರ ಆಘಾತ ಮೂಡಿಸಿದ್ದು, ಕೌಟುಂಬಿಕ ಕಲಹದ ನೆಪದಲ್ಲಿ ಇಬ್ಬರು ಮಹಿಳೆಯರನ್ನು ಬರ್ಬರವಾಗಿ ಹತ್ಯೆಗೈದಿರುವ ಕೃತ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

