
ಶತಮಾನದ ಸಂಭ್ರಮದಲ್ಲಿ ಇರುವ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯ ಕುಟುಂಬ ವೈದ್ಯರ ವಿಭಾಗಕ್ಕೆ ರಾಜ್ಯ ನಿರ್ದೇಶಕರಾಗಿ ( Director, IMA College of General Practice) ಖ್ಯಾತ ಕುಟುಂಬ ವೈದ್ಯರಾದ ಡಾ ಎಂ ಅಣ್ಣಯ್ಯ ಕುಲಾಲ್ ಅವರನ್ನ ನೇಮಿಸಲಾಗಿದೆ.
ಡಾ ಕುಲಾಲ್ ಅವರು, ಐಎಂಎ ಮಂಗಳೂರಿನ ಅಧ್ಯಕ್ಷರಾಗಿ, ಕರಾವಳಿ, ಮಲೆನಾಡು, ಮೈಸೂರು, ಬೆಳಗಾಂ ವಿಭಾಗಗಳ ಸಂಚಾಲಕರಾಗಿ, ರಾಜ್ಯ ಐಎಂಎ ಉಪಾಧ್ಯಕ್ಷರಾಗಿ ಕಳೆದ 2 ದಶಕಗಳಿಂದ ಸಂಘಟನೆ ಮೂಲಕ ಸೇವೆ ಸಲ್ಲಿಸಿದ್ದರು.
ಮಂಗಳೂರಲ್ಲಿ ಎರಡು ಬಾರಿ ಕುಟುಂಬ ವೈದ್ಯರ ರಾಜ್ಯ ಸಮ್ಮೇಳನ ಹಾಗು ಒಂದು ಬಾರಿ ಐಎಂಎ ರಾಜ್ಯ ಸಮ್ಮೇಳನ ನಡೆಯಿಸಿ ಸಂಘಟಿಸಿದ್ದರು. ಅವರ ಸಂಘಟನಾ ಸೇವೆಗೆ ಜಿಲ್ಲೆ ರಾಜ್ಯ ಹಾಗು ರಾಷ್ಟ್ರ ಮಟ್ಟದ ಐಎಂಎ ಸ್ಥಾಪಕರಾದ “ಡಾ ಬಿ ಸಿ ರಾಯ್ ನೆನಪಿನ ಶ್ರೇಷ್ಠ ಸಮಾಜಮುಖಿ ವೈದ್ಯ ಪುರಸ್ಕಾರ” ಹಾಗು “ರಾಜ್ಯ ಸರಕಾರದ ಪ್ರತಿಷ್ಟಿತ ಡಿ. ದೇವರಾಜ ಅರಸು ಪುರಸ್ಕಾರ ದೊರೆತಿದೆ” .
ವೆನ್ಲಾಕ್ ಆಸ್ಪತ್ರೆಯ ಪ್ಯಾಲಿಯೇಟಿವ್ ವಿಭಾಗದ ಮುಖ್ಯಸ್ಥರಾಗಿರುವ ಇವರು ಮಂಗಳೂರು ಕುಟುಂಬ ವೈದ್ಯರ ಸಂಘಟನೆಯ ಸ್ಥಾಪಕ ಕಾರ್ಯದರ್ಶಿ ಆಗಿಯೂ ದುಡಿದು ಕುಟುಂಬ ವೈದ್ಯ ಪದ್ಧತಿಯ ಉಳಿವಿಗಾಗಿ ಯುವ ವೈದ್ಯರುಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

