ಮದುವೆಗೆ ಬಂದ ನಾಲ್ವರು ಸ್ನೇಹಿತರು ತುಂಗಾ ನದಿಯಲ್ಲಿ ಜಲಸಮಾಧಿ!

0
5

ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ನಾಲ್ವರು ಯುವಕರು ಪ್ರವಾಸದ ವೇಳೆ ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ತೀರ್ಥಹಳ್ಳಿ ತಾಲೂಕಿನ ಮಹಿಷಿ ಗ್ರಾಮದ ಬಳಿ ನಡೆದಿದೆ. ನದಿಯಲ್ಲಿ ಕಣ್ಮರೆಯಾಗಿದ್ದ ನಾಲ್ವರ ಮೃತದೇಹಗಳನ್ನೂ ಇದೀಗ ಹೊರತೆಗೆಯಲಾಗಿದೆ.

ಮೃತರನ್ನು ಬೆಂಗಳೂರಿನ ಕತ್ರಿಗುಪ್ಪೆ ನಿವಾಸಿಗಳಾದ ಕಾರ್ತಿಕ್ (31), ಪವನ್ (30), ನಕುಲ್ (19) ಹಾಗೂ ಚೇತನ್ (19) ಎಂದು ಗುರುತಿಸಲಾಗಿದೆ. ಇವರಲ್ಲಿ ಕಾರ್ತಿಕ್ ಮತ್ತು ಪವನ್ ವೃತ್ತಿಯಲ್ಲಿ ವಕೀಲರಾಗಿದ್ದು, ನಕುಲ್ ಕಾನೂನು ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ.

ಪ್ರವಾಸದ ಮೋಜು ದುರಂತದಲ್ಲಿ ಅಂತ್ಯ:

ಶಿವಮೊಗ್ಗ ನಗರದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ನಾಲ್ವರು ಯುವಕರು ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದರು. ಗೂಗಲ್‌ನಲ್ಲಿ ಪ್ರವಾಸಿ ತಾಣವೊಂದನ್ನು ಹುಡುಕಿಕೊಂಡು ಎರಡು ಟಿಟಿ ವಾಹನಗಳಲ್ಲಿ ಮಹಿಷಿ ಗ್ರಾಮದತ್ತ ಪ್ರಯಾಣ ಬೆಳೆಸಿದ್ದರು.

ನದಿ ತೀರದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಓರ್ವ ಯುವಕ ಆಕಸ್ಮಿಕವಾಗಿ ನೀರಿಗೆ ಇಳಿದು ಮುಳುಗತೊಡಗಿದ್ದಾನೆ. ಇದನ್ನು ಗಮನಿಸಿದ ಉಳಿದ ಮೂವರು ಸ್ನೇಹಿತರು ಆತನನ್ನು ರಕ್ಷಿಸುವ ಉದ್ದೇಶದಿಂದ ನದಿಗೆ ಧುಮುಕಿದ್ದಾರೆ. ಆದರೆ, ನದಿಯ ತೀವ್ರ ನೀರಿನ ಸೆಳೆತಕ್ಕೆ ಸಿಲುಕಿದ ನಾಲ್ವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈಶ್ವರ್ ಮಲ್ಪೆ ತಂಡದಿಂದ ಶೋಧ ಕಾರ್ಯಾಚರಣೆ:

ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮಾಳೂರು ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳೀಯರ ನೆರವಿನೊಂದಿಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ನಕುಲ್ ಅವರ ಮೃತದೇಹ ಮೊದಲು ಪತ್ತೆಯಾಗಿತ್ತು.

ಬಳಿಕ ಕರಾವಳಿಯ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದು, ನದಿಯಲ್ಲಿ ಕಣ್ಮರೆಯಾಗಿದ್ದ ಉಳಿದ ಮೂವರ ಮೃತದೇಹಗಳನ್ನೂ ಪತ್ತೆಹಚ್ಚಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.

ಕುಟುಂಬಸ್ಥರ ಆಕ್ರಂದನ:

ನಾಲ್ವರು ಯುವಕರ ಮೃತದೇಹಗಳನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಮದುವೆಯ ಸಂಭ್ರಮದಲ್ಲಿ ಭಾಗವಹಿಸಿ ಸಂತೋಷದಿಂದ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಯುವಕರು ಜಲಸಮಾಧಿಯಾಗಿರುವ ಸುದ್ದಿ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ತೀವ್ರ ದುಃಖ ಮೂಡಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.