ಸಿದ್ಧಾಪುರ : ವಿದ್ಯಾರ್ಥಿಗಳಲ್ಲಿ ವ್ಯವಹಾರ ಜ್ಞಾನ, ಉದ್ಯಮಶೀಲತೆ ಹಾಗೂ ವ್ಯಾಪಾರ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಸುಮುಖ ಎಜ್ಯುಕೇಷನಲ್ ಟ್ರಸ್ಟ್ (ರಿ.) ಸಿದ್ಧಾಪುರ ಪ್ರವರ್ತಿತ ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನವೆಂಬರ್ 30ರಂದು ‘ಬಿಝ್ ಕಾರ್ನಿವಾಲ್ 2026’ ವ್ಯವಹಾರ ಮೇಳವನ್ನು ಆಯೋಜಿಸಲಾಗಿದೆ.
ಸಿದ್ಧಾಪುರದ ಜ್ಞಾನಸರಸ್ವತಿ ಪಿಯು ಕಾಲೇಜಿನ ಆವರಣದಲ್ಲಿ ಬೆಳಿಗ್ಗೆ 8.30ರಿಂದ ಸಂಜೆವರೆಗೆ ನಡೆಯಲಿರುವ ಈ ಮೇಳದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಿ ವ್ಯಾಪಾರ ಚಟುವಟಿಕೆಗಳನ್ನು ನಡೆಸಲಿದ್ದಾರೆ. ಸುಮಾರು 35ಕ್ಕೂ ಅಧಿಕ ಮಳಿಗೆಗಳಲ್ಲಿ ವಿವಿಧ ವಸ್ತುಗಳ ಮಾರಾಟ ಹಾಗೂ ಖರೀದಿ ಪ್ರಕ್ರಿಯೆಗಳು ನಡೆಯಲಿವೆ.
ಶಿಕ್ಷಣದ ಜೊತೆಗೆ ಬದುಕಿನ ಅವಿಭಾಜ್ಯ ಅಂಗವಾಗಿರುವ ವ್ಯಾಪಾರ ಮತ್ತು ವ್ಯವಹಾರದ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಈ ಮೇಳದ ಪ್ರಮುಖ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಸ್ವತಃ ಮಳಿಗೆಗಳನ್ನು ನಿರ್ವಹಿಸುವ ಮೂಲಕ ವ್ಯಾಪಾರ ನಿರ್ವಹಣೆ, ಗ್ರಾಹಕರೊಂದಿಗೆ ಸಂವಹನ, ಖರೀದಿ, ಮಾರಾಟ ಹಾಗೂ ಆರ್ಥಿಕ ವ್ಯವಹಾರಗಳ ಕುರಿತು ಅನುಭವ ಪಡೆದುಕೊಳ್ಳಲಿದ್ದಾರೆ.
‘ಬಿಝ್ ಕಾರ್ನಿವಾಲ್ 2026’ಕ್ಕೆ ವಂಡಾರಿನ ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಸಂಪತ್ ಶೆಟ್ಟಿ ಚಾಲನೆ ನೀಡಲಿದ್ದು, ಉಡುಪಿಯ ಪೂರ್ಣಪ್ರಜ್ಞಾ ಕಾಲೇಜು ಹಾಗೂ ಸೃಷ್ಟಿ ಇನ್ಫೋಟೆಕ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯ ಹರ್ಷವರ್ಧನ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ಕುಂದಾಪುರ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮಗಳೂ ನಡೆಯಲಿದ್ದು, ವ್ಯವಹಾರ ಮೇಳಕ್ಕೆ ಮತ್ತಷ್ಟು ಮೆರುಗು ನೀಡಲಿವೆ.
ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ವ್ಯಾಪಾರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂತೆ ಸುಮುಖ ಎಜ್ಯುಕೇಷನಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಜ್ಞಾನಸರಸ್ವತಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ, ಕಾರ್ಯದರ್ಶಿ ಯು. ಪಾಂಡುರಂಗ ಪಡಿಯಾರ್, ಜ್ಞಾನಸರಸ್ವತಿ ಪಿಯು ಕಾಲೇಜಿನ ಪ್ರಾಂಶುಪಾಲ ಅಮರೇಶ್ ಹೆಗ್ಡೆ ಹಾಗೂ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ವಿನಂತಿಸಿದ್ದಾರೆ.

