ಮುದ್ರಾಡಿ ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ಪುರಸ್ಕಾರ

0
3

ಹೆಬ್ರಿ : ವಿದ್ಯೆ ಸಹಿತ ಯಾವುದೇ ವಸ್ತು ಸುಲಭದಲ್ಲಿ ದೊರೆತದ್ದು ಸರಿಯಾಗಿ ದಕ್ಕುವುದಿಲ್ಲ. ಅದಕ್ಕಾಗಿ ಅವುಗಳನ್ನು ಪಡೆಯಲು ಸತತ ಅಭ್ಯಾಸ, ಸತತ ಪ್ರಯತ್ನ, ಚಿಂತನ, ಮಂಥನ ಅಗತ್ಯ. ಮುದ್ರಾಡಿಯ ಆಸುಪಾಸಿನ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣಕ್ಕಾಗಿ ದೂರದ ಶಾಲೆ ಕಾಲೇಜುಗಳಿಗೆ ತೆರಳಲು ಕಾಲ್ನಡಿಗೆ ಅಥವಾ ಹೊಳೆಯನ್ನು ದಾಟುವ ಕಷ್ಟದ ಪರಿಸ್ಥಿತಿಯನ್ನು ಮನಗಂಡು ಮುದ್ರಾಡಿಯ ಕೃಷ್ಣ ಡಿ. ಶೆಟ್ಟಿ ಮತ್ತು ಅವರ ಕುಟುಂಬದವರು ಇಲ್ಲಿಯೇ ಪ್ರೌಢಶಾಲೆಯನ್ನು ಸ್ಥಾಪಿಸಿದ್ದು, ಊರಿನವರ ಸುಯೋಗ ಹಾಗೂ ಅವರು ಸದಾ ಪ್ರಾತ:ಸ್ಮರಣೀಯರು.

ಕಳೆದ 34 ವರ್ಷಗಳಿಂದ ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಹಾಗೂ ಶಿಸ್ತುಬದ್ದವಾದ ಪ್ರೌಢ ಶಿಕ್ಷಣವನ್ನು ನೀಡುತ್ತಿರುವ ಮುದ್ರಾಡಿಯ ಈ ಸಂಸ್ಥೆಯು ಮಾದರಿಯಾಗಿದೆ ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಸಂಸ್ಥೆಯ ವಿದ್ಯಾರ್ಥಿನಿ ಪ್ರತೀಕ್ಷ ಕುಲಾಲ್ ತಾಲೂಕಿಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹಾಗೂ ಕಾರ್ಕಳ ವಲಯದ ಅನುದಾನಿತ ಪ್ರೌಢಶಾಲೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುವುದು ಸಂಸ್ಥೆಯ ಹಿರಿಮೆಗೆ ಮತ್ತೊಂದು ಗರಿ ಇಟ್ಟಂತಾಗಿದೆ. ಇಲ್ಲಿನ ಶಿಕ್ಷಕರ ಬದ್ಧತೆ ಮತ್ತು ಸೇವಾ ಮನೋಭಾವನೆ ಶ್ಲಾಘನೀಯವಾದುದು . ಸಂಸ್ಥೆಯಲ್ಲಿ ಕೇವಲ ಪಾಠಕ್ಕೆ ಮಾತ್ರ ಒತ್ತು ನೀಡದೆ ಸಂಸ್ಕಾರ, ಸಂಸ್ಕೃತಿಯನ್ನು ಬಿಂಬಿಸುವ ಹತ್ತಾರು ಚಟುವಟಿಕೆಗಳನ್ನು ನಡೆಸುತ್ತಿರುವುದು ಮಕ್ಕಳ ಪ್ರಗತಿಗೆ ನೆರವಾಗಿದೆ.ಗ್ರಾಮೀಣ ಭಾಗದ ಈ ಸಂಸ್ಥೆಯನ್ನು ಮುನ್ನಡೆಸುವಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ರೇಷ್ಮೆ ಇಲಾಖೆಯ ನಿವೃತ್ತ ಉದ್ಯೋಗಿ ಕಾಪೋಳಿ ಶ್ರೀಧರ ಹೆಬ್ಬಾರ್ ಹೇಳಿದರು . ಅವರು ಮುದ್ರಾಡಿಯ ಎಂ.ಎನ್‌.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ 2026- 27 ನೇ ಸಾಲಿನ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಂತ್ರಪಲ್ಕೆ ಅಶೋಕ್ ಪೂಜಾರಿ ಅವರು ಮಾತನಾಡಿ ಇಲಾಖಾ ಹಾಗೂ ಇತರ ಕಾರ್ಯಕ್ರಮಗಳ ಜೊತೆಯಲ್ಲಿ ಪಠ್ಯ ಬೋಧನೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಆಸಕ್ತಿ ನೀಡುತ್ತಿರುವುದು ಇಲ್ಲಿಯ ಶಿಕ್ಷಕರ ವಿಶೇಷತೆ ಎಂದು ಹೇಳಿದರು.ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷೆ ಪ್ರತಿಮಾ ದೇವಾಡಿಗ ಉಪ್ಪಳ ಹಾಗೂ ಶಾಲಾ ವಿದ್ಯಾರ್ಥಿ ನಾಯಕ ಪ್ರತೀಕ್ ಹೆಬ್ಬಾರ್ ಶುಭ ಹಾರೈಸಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಶಾಲೆಯ ಅಭಿವೃದ್ಧಿಗೆ ಸಹಕರಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಮಕ್ಕಳ ಲೋಕ ಹಸ್ತಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಪಟ್ಟಿಯನ್ನು ಶ್ಯಾಮಲಾ, ರಘುಪತಿ ಹೆಬ್ಬಾರ್ ಹಾಗೂ ಅನುಷಾ ವಾಚಿಸಿದರು.
ಸಂಸ್ಥೆಯಲ್ಲಿ ಕಳೆದ ಸಾಲಿನಲ್ಲಿ ಗೌರವ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ಚಂದ್ರಕಾಂತಿ ಹೆಗ್ಡೆ ಅವರನ್ನು ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರಕ್ಕೆ ಆರ್ಥಿಕ ಹಾಗೂ ವಿಶೇಷ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.ಭಾಷಾ ಶಿಕ್ಷಕ ಪಿ ವಿ.ಆನಂದ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರೆ,ಮಹೇಶ್ ನಾಯ್ಕ್ ವಂದಿಸಿದರು.ಶಿಕ್ಷಕರಾದ ಶ್ಯಾಮಲಾ,ರಘುಪತಿ ಹೆಬ್ಬಾರ್, ಕು. ಅನುಷಾ, ಸಿಬ್ಬಂದಿ ಮಹೇಶ್ ಕಾನ್ಗುಂಡಿ ಸಹಕರಿಸಿದರು.ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳು ಪೋಷಕರು ವಿದ್ಯಾಭಿಮಾನಿ ಬಂಧುಗಳು ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ತರುವಾಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮಗಳು ಜರುಗಿದವು.ಆನಂದ ಪಿವಿ ಸಾಲಿಗ್ರಾಮ ಇವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಸಹಸ್ರಕಂಠ ರಾವಣ ಎನ್ನುವ ತಾಳಮದ್ದಲೆಯನ್ನು ನಡೆಸಿಕೊಟ್ಟರು.