
ಹೆಬ್ರಿ : ಕಾರ್ತಿಕ ಮಾಸದಲ್ಲಿ ದೀಪಗಳನ್ನು ಹಚ್ಚುವುದರಿಂದ, ದೇವರ ನಾಮಸಂಕೀರ್ತನೆ ಮಾಡುವುದರಿಂದ ವಿಶೇಷ ಫಲ ದೊರೆಯುತ್ತದೆ. ನಮ್ಮೆಲ್ಲರ ಅನಿಷ್ಟಗಳು ದೂರವಾಗಿ ಬದುಕು ಮಂಗಲಮಯವಾಗುತ್ತದೆ. ಪ್ರತಿನಿತ್ಯವೂ ನೂರಾರು ಗೋವುಗಳ ಆರಾಧನೆಯನ್ನು ಮಾಡುತ್ತಾ ಬಂದಿರುವ ಗಿಲ್ಲಾಳಿ ಗೋಶಾಲೆಯಲ್ಲಿ ನಿರಂತರವಾಗಿ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಸೇವಾ ಕಾರ್ಯಗಳು ನಡೆಯುತ್ತಿರುವುದು ಅತ್ಯಂತ ಸಂತಸದ ಸಂಗತಿ. ಭಗವಂತನ ಆರಾಧನೆ,ಭಗವತ್ ಜ್ಞಾನಿಗಳ ಆರಾಧನೆ ಹಾಗೂ ಗೋವುಗಳ ಆರಾಧನೆ ನಡೆಯುವ ತ್ರಿವೇಣಿ ಸಂಗಮವಾಗಿರುವ ಈ ಗೋಶಾಲೆಯ ಅಭಿವೃದ್ಧಿಯಲ್ಲಿ ಎಲ್ಲರೂ ನಿರಂತರವಾಗಿ ಕೈಜೋಡಿಸಿ ಶ್ರೀ ಗೋಪಾಲಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ಪೇಜಾವರ ಮಠದ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಹೇಳಿದರು.
ಅವರು ಹೆಬ್ರಿ ಗಿಲ್ಲಾಳಿ ಶ್ರೀ ವಿಶ್ವೇಶಕೃಷ್ಣ ಗೋಶಾಲೆಯಲ್ಲಿ ನಡೆದ ಸಹಸ್ರ ದೀಪೋತ್ಸವದ ಸಂದರ್ಭದಲ್ಲಿ ಶ್ರೀ ಕೃಷ್ಣನ ತೊಟ್ಟಿಲ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಕೃಷ್ಣದಾಸ ಭಟ್, ನಕ್ರೆ ರವಿಕುಮಾರ್ ಆಚಾರ್ಯ, ಮುದ್ರಾಡಿ ರಾಘವೇಂದ್ರ ಅಡಿಗ ಅವರ ಪೌರೋಹಿತ್ಯದಲ್ಲಿ ಚಕ್ರಾಬ್ಜ ಮಂಡಲಾರಾಧನೆ ನಡೆಯಿತು. ಖ್ಯಾತ ಆಕಾಶವಾಣಿ ಕಲಾವಿದರಾದ ಉಡುಪಿ ನಾರಾಯಣ ಶರಳಾಯ ಹಾಗೂ ಬಳಗದವರಿಂದ ದಾಸ ಸಿಂಚನ ಕಾರ್ಯಕ್ರಮ ನಡೆಯಿತು.

ಗೋಶಾಲೆಯ ಟ್ರಸ್ಟಿಗಳಾದ ಎಂ. ರವಿ ರಾವ್, ಡಾ. ಭಾರ್ಗವಿ ಐತಾಳ್, ಯೋಗೀಶ್ ಭಟ್ ಹೆಬ್ರಿ, ವಿಷ್ಣುಮೂರ್ತಿ ಆಚಾರ್ಯ ಗಿಲ್ಲಾಳಿ, ಶ್ರೀಕಾಂತ್ ಭಟ್ ಅಜೆಕಾರು, ವಿಷ್ಣುಮೂರ್ತಿ ನಾಯಕ್ ಹೆಬ್ರಿ, ಲಕ್ಷ್ಮಣ್ ಭಟ್ ಹೆಬ್ರಿ ಉಪಸ್ಥಿತರಿದ್ದರು.
ಟ್ರಸ್ಟಿಗಳಾದ ವಿದ್ವಾನ್ ಪದ್ಮನಾಭ ಆಚಾರ್ಯ ಗಿಲ್ಲಾಳಿ ಸ್ವಾಗತಿಸಿ, ಬಲ್ಲಾಡಿ ಚಂದ್ರಶೇಖರ ಭಟ್ ವಂದಿಸಿದರು. ಶ್ರೀ ಅರ್ಧನಾರೀಶ್ವರ ಭಜನಾ ಮಂಡಳಿ, ಗಿಲ್ಲಾಳಿ ಹೆಬ್ರಿ ಹಾಗೂ ಹೆಬ್ರಿ ಪರಿಸರದ ನೂರಾರು ಭಕ್ತರ ಸಹಕಾರದಿಂದ ಕಾರ್ಯಕ್ರಮ ಸಂಪನ್ನಗೊಂಡಿತು.ಇದೇ ಸಂದರ್ಭದಲ್ಲಿ ಸ್ವಾಮೀಜಿಯವರು ನಿರ್ಮಾಣ ಹಂತದಲ್ಲಿರುವ ಮೋಕ್ಷಧಾಮ ಕಟ್ಟಡದ ಪ್ರಗತಿ ಪರಿಶೀಲನೆ ಮಾಡಿ ಮಾರ್ಗದರ್ಶನ ನೀಡಿದರು.
