ಕಾರ್ಕಳ : ಹಿರಿಯ ಹೋಟೆಲ್ ಉದ್ಯಮಿ ನಂದಳಿಕೆಯ ಸುಬ್ಬಯ್ಯ ವಿ. ಶೆಟ್ಟಿಯವರು (95) ಅಲ್ಪಕಾಲದ ಅಸೌಖ್ಯದಿಂದ ಎ. 17ರಂದು ಮುಂಬಯಿಯ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮುಂಬಯಿಯ ವಿಲೇಪಾರ್ಲೇ, ಲೋನಾವಾಲ, ಪುಣೆ ನಗರಗಳಲ್ಲಿ ಹೊಟೇಲ್ ‘ರಾಮಕೃಷ್ಣ’ದ ಮುಖಾಂತರ ಕರಾವಳಿ ಕನ್ನಡಿಗರು ನೆಲೆಯಾಗಲು ಶ್ರಮಿಸಿದ ಹಿರಿಯ ಉದ್ಯಮಿಗಳಲ್ಲಿ ಸುಬ್ಬಯ್ಯ ಶೆಟ್ಟಿಯವರೂ ಒಬ್ಬರು. ಮೂಲತ: ಬೋಳ ಪರ್ತಿಮಾರಗುತ್ತಿನವರಾದ ಇವರು ಬೋಳ ಶ್ರೀ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನ, ಬೋಳ ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ದೇವಸ್ಥಾನ ಮತ್ತು ದೈವಸ್ಥಾನಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದರು. ಪತ್ನಿ ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಅವರ ಅಂತಿಮ ವಿಧಿವಿಧಾನಗಳು ಅಂಧೇರಿ ಪೂರ್ವದ ಚಾಕಲಾ ಸ್ಮಶಾನದಲ್ಲಿ ನಡೆಯಲಿದೆ. ಅವರ ನಿವಾಸ ರಾಮಕೃಷ್ಣ ಬಂಗಲೆ, ಗಂಗಾ ಭವನ ಸೊಸೈಟಿ, ಜೆಪಿ ರಸ್ತೆಯಿಂದ ಅಂತ್ಯಕ್ರಿಯೆ ಹೊರಡಲಿದೆ.