ಮಲ್ಪೆ ಬಂದರಿನಲ್ಲಿ ಬಾಂಬ್ ಸ್ಫೋಟ..!

0
1148

ಮಲ್ಪೆ: ಭಾರತ ಪಾಕಿಸ್ಥಾನ ಯುದ್ಧ ಭೀತಿಯ ನಡುವಿನಲ್ಲೇ ಇದೀಗ ನಗರದ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮಂಗಳವಾರ ಸಂಜೆ ಬಾಂಬ್ ಸ್ಫೋಟಗೊಂಡು ಐವರು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ.

ಸಂಜೆ ಸುಮಾರು 4.30ಕ್ಕೆ ಬಂದರಿನಲ್ಲಿ ಕುಳಿತಿದ್ದ ಮೀನುಗಾರರಿಗೆ ಒಮ್ಮೆಲೆ ದೊಡ್ಡ ಸದ್ದು ಕೇಳಿಸಿತು. ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಗಾಬರಿಯಿಂದ ಓಡಿದರು. ತತ್‌ಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ.

ಗಾಯಗೊಂಡ ಐವರು ಮೀನುಗಾರರನ್ನು ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಇದು ನಿಜ ಘಟನೆ ಅಲ್ಲ. ಸಂಭಾವ್ಯ ಆತಂಕದ ಹಿನ್ನೆಲೆಯಲ್ಲಿ ನಡೆದ ಅಣಕು ಪ್ರದರ್ಶನವಷ್ಟೆ.
ಮಲ್ಪೆ ಮೀನುಗಾರರ ಸಂಘ, ಕರಾವಳಿ ಕಾವಲು ಪಡೆ, ಆರೋಗ್ಯ ಇಲಾಖೆ, ಮೀನುಗಾರಿಕೆ ಇಲಾಖೆ, ಅಗ್ನಿಶಾಮಕ ದಳ, ಕಸ್ಟಮ್ಸ್ ವತಿಯಿಂದ ಜಂಟಿಯಾಗಿ ಮಲ್ಪೆ ಬಂದರಿನಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಯಿತು.

ಅಗ್ನಿಶಾಮಕ ವಾಹನವು ಸೈರನ್ ಮೊಳಗಿಸುತ್ತ ಬಂದರಿಗೆ ಬಂದು ತಾತ್ಕಾಲಿಕ ಬೆಂಕಿಯನ್ನು ನಂದಿಸಿ, ಗಾಯಗೊಂಡವರನ್ನು ರಕ್ಷಿಸುವ ಅಣಕು ಕಾರ್ಯಾಚರಣೆ ಮಾಡಲಾಯಿತು. ಅನಂತರ ಕರಾವಳಿ ಕಾವಲು ಪಡೆಯ ಎಸ್‌ಪಿ ಮಿಧುನ್ ಹಾಗೂ ಅಧಿಕಾರಿಗಳು ಮೀನುಗಾರರಿಗೆ ಕಾರ್ಯಾಚರಣೆಯ ಮಹತ್ವವನ್ನು ವಿವರಿಸಿದರು.

ಕರಾವಳಿ ಕಾವಲು ಪಡೆಯ ಸಿಬಂದಿ ಬೋಟ್‌ನಲ್ಲಿ ಶಸ್ತ್ರಸಜ್ಜಿತರಾಗಿ ಬಂದರಿನ ಸುತ್ತಲೂ ಗಸ್ತು ತಿರುಗುವ ಮೂಲಕ ವಿಶೇಷ ಸನ್ನಿವೇಶದಲ್ಲಿ ಇಲಾಖೆಯ ಕಾರ್ಯದ ಬಗ್ಗೆ ಅರಿವು ಮೂಡಿಸಿದರು. ಕರಾವಳಿ ಕಾವಲು ಪಡೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ್, ಸೀತಾರಾಮ್, ಪಿಎಸ್‌ಐ ಫೆಮಿನಾ ಮೊದಲಾದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕರ್ನಾಟಕದ 12 ಪ್ರಮುಖ ಬಂದರಿನಲ್ಲಿ ಮಲ್ಪೆ ಬಂದರು ಪ್ರಮುಖವಾಗಿದೆ. ಅತೀ ಹೆಚ್ಚು ಮೀನುಗಾರಿಕೆ ಚಟುವಟಿಕೆ ನಡೆಯುವ ಬಂದರು ಇದಾಗಿದ್ದು, ಇಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೇ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬ ಬಗ್ಗೆ ಅಣಕು ಕಾರ್ಯಾಚರಣೆಯನ್ನು ನೀಡಲಾಗಿದೆ. ಮೀನುಗಾರರು 3 ಬೋಟ್‌ಗಳು ಒಟ್ಟಿಗೆ ಮೀನುಗಾರಿಕೆ ತೆರಳಬೇಕು. ಸೂಕ್ಷ್ಮಪ್ರದೇಶಗಳಿಗೆ ಮೀನುಗಾರಿಕೆಗೆ ತೆರಳುವಾಗ ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ ಎಂದು ಕರಾವಳಿ ಕಾವಲು ಪಡೆ ಎಸ್ಪಿ, ಮಿಥುನ್ ತಿಳಿಸಿದ್ದಾರೆ.

          LEAVE A REPLY

          Please enter your comment!
          Please enter your name here