ಕೊಡವೂರು ಕಾನಂಗಿ ಶ್ರೀ ದೇವಿ ಜ್ಞಾನೋದಯ ಪಾಂಡುರಂಗ ಭಜನ ಮಂದಿರ: ಶಿಲಾಮಯ ಮಂದಿರ ಲೋಕಾರ್ಪಣೆ, ಬ್ರಹ್ಮಕಲಶಕ್ಕೆ ಸಿದ್ಧತೆ

0
145

ಮಲ್ಪೆ: ಕೊಡವೂರು ಕಾನಂಗಿ ಶ್ರೀ ದೇವಿ ಜ್ಞಾನೋದಯ ಪಾಂಡುರಂಗ ಭಜನಾ ಮಂದಿರದ ನೂತನ ಶಿಲಾಮಯ ಮಂದಿರ ಲೋಕಾರ್ಪಣೆ. ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ಇತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಮೇ 16ರಿಂದ 26ರ ವರೆಗೆ ಜರಗಲಿದ್ದು ಈಗಾಗಲೇ ಸಕಲ ಸಿದ್ದತೆಗಳು ಭರದಿಂದ ಸಾಗಿ ಪೂರ್ಣಗೊಳ್ಳುತ್ತಿದೆ.

ಶಿಲಾಮಯ ಮಂದಿರ ಸಮರ್ಪಣೆಯ ಪ್ರಚಾರ ಬಹುತೇಕ ಮುಗಿದಿದ್ದು ನಗರಗಳನ್ನು ಶೃಂಗರಿಸಲಾಗಿದೆ. ಬರುವ ಭಕ್ತರಿಗೆ ಯಾವ ತೊಂದರೆಗಳು ಆಗದಂತೆ ಆಡಳಿತ ಸಮಿತಿ, ‘ಜೀರ್ಣೋದ್ದಾರ ರೂಪುರೇಷೆಗಳನ್ನು ಸಮರ್ಪಕವಾಗಿ ಸಿದ್ಧಪಡಿಸಿಕೊಂಡಿದೆ. ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗಿದ್ದು, ಸುಂದರವಾದ ಚಪ್ಪರವನ್ನು ನಿರ್ಮಿಸಲಾಗಿದೆ.

ಮೇ 19, 22 ಮತ್ತು 26ರಂದು ಸಾರ್ವಜನಿಕ ಅನ್ನಸಂತರ್ಪಣೆಯ ವ್ಯವಸ್ಥೆ ಇದ್ದು, ಭೋಜನ ವ್ಯವಸ್ಥೆಗೆ ಈಗಾಗಲೇ ಚಪ್ಪರಗಳನ್ನು ಹಾಕಲಾಗಿದ್ದು ಕುಳಿತುಕೊಂಡು ಮತ್ತು ಬಫೆ ಭೋಜನ ಮಾಡುವ ವ್ಯವಸ್ಥೆಗೆ ಅವಕಾಶವನ್ನು ಮಾಡಿ ಕೊಡಲಾಗಿದೆ. ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡ ಆಯಕಟ್ಟಿನ ಸ್ಥಳದಲ್ಲಿ ಕಲ್ಪಿಸಲಾಗಿದೆ.

ಚಪ್ಪರ ಮುಹೂರ್ತ

ಮೇ 16ರಿಂದ ಮೇ 26ರವರೆಗೆ ಜರಗಲಿರುವ ಶಿಲಾಮಯ ಮಂದಿರ ಸಮರ್ಪಣೆ, ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ಇತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಚಪ್ಪರ ನಿರ್ಮಾಣದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತವು ರವಿವಾರ ನಡೆಯಿತು. ಕಂಬ್ಳಕಟ್ಟ ಶ್ರೀನಿವಾಸ ಉಪಾದ್ಯಾಯ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರಗಿದವು. ಅಡಳಿತ ಮಂಡಳಿಯ ಅಧ್ಯಕ್ಷ ಹರೀಶ್ ಬಂಗೇರ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಅಶೋಕ್ ಪುತ್ರನ್, ಸತೀಶ್ ಬಂಗೇರ, ಮಂದಿರದ ಪದಾಧಿಕಾರಿಗಳು ಹಾಗೂ ಮಹಿಳಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

ಮಂದಿರದ ಹಿನ್ನೆಲೆ

ಊರಿನ ಹಿರಿಯರೆಲ್ಲರೂ ಸೇರಿಕೊಂಡು ಬೈಲು ಮನೆಯ ಮುಂಭಾಗದಲ್ಲಿ ಚಿಕ್ಕ ಕಟ್ಟಡ ಒಂದರಲ್ಲಿ ಶ್ರೀ ವಿಠೋಭ ರುಖುಮಾಯಿ ದೇವರ ಸಂಕೀರ್ತನೆಯನ್ನು ಮಾಡಿಕೊಂಡು ಬರುತ್ತಿದ್ದು, ಆನಂತರದ ದಿನದಲ್ಲಿ ಅರ್ಚಕರಿಗೆ ಶ್ರೀದೇವಿಯ ಆಕರ್ಷಣೆಯಾಗಿ ಶ್ರೀ ದೇವಿಯ ಪ್ರತಿಷ್ಠೆ ಮಾಡುವ ಪ್ರೇರಣೆಯಾಯಿತು. ದೇವಿಯ ಪ್ರೇರಣೆಯಂತೆ 1972ರಲ್ಲಿ ಭಜನಾ ಮಂದಿರಕ್ಕೆ ಪ್ರತ್ಯೇಕ ಸ್ಥಳವೂ ದೊರಕಿದ್ದು ಭಕ್ತರ ಸಹಕಾರ ಮತ್ತು ಮಲ್ಪೆ ಮಧ್ವರಾಜ್ ಅವರ ಸಹಕಾರದೊಂದಿಗೆ ಹಂಚಿನ ಛಾವಣೆಯ ಕಟ್ಟಡ ಕಟ್ಟಿಲಿಂಗ ರೂಪದ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿ ಆರಾಧಿಸುತ್ತಾ ಬಂದಿರುವುದು ಆಗಿರುತ್ತದೆ. ಪ್ರಸ್ತುತ ಮಂದಿರ ಶಿಥಿಲಗೊಂಡ ಹಿನ್ನೆಲೆಯಲ್ಲಿ ಮತ್ತು 4 ವರ್ಷದೊಳಗೆ ಮಂದಿರದ ನೂತನ ಕಟ್ಟಡ ರಚನೆಯಾಗಬೇಕು ಎಂದು ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದ ಕಾರಣ ಊರಿನ ಭಕ್ತರು ದಾನಿಗಳ ಸಹಕಾರದಿಂದ ಇದನ್ನು ಮನಗಂಡು ಊರಿನ ಭಕ್ತರು ಒಗ್ಗೂಡಿ ಸುಮಾರು 2 ಕೋ. ರೂ. ವೆಚ್ಚದಲ್ಲಿ ನೂತನ ಶಿಲಾಮಯ ಮಂದಿರ ನಿರ್ಮಾರ್ಣಕ್ಕೆ ಮುಂದಾಗಿದ್ದು ಇದೀಗ ಪೂರ್ಣಗೊಂಡು ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ.

LEAVE A REPLY

Please enter your comment!
Please enter your name here