ಕಲ್ಕುಡ ಕಲ್ಲುರ್ಟಿ ಮತ್ತು ಕೊರಗಜ್ಜ ದೈವದ ನಿಷ್ಠುರ ನ್ಯಾಯ
ಹೆಬ್ರಿ: ಸ್ಥಳೀಯವಾಗಿ ಅತ್ಯಂತ ಪೂಜ್ಯನೀಯನಾಗಿರುವ ಕಲ್ಕುಡ ಕಲ್ಲುರ್ಟಿ ಮತ್ತು ಕೊರಗಜ್ಜ ದೈವಗಳು ತಮ್ಮ ಶಕ್ತಿ ಮತ್ತು ಪವಾಡವನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಅಪರೂಪದ ಘಟನೆ ಅಭಯಹಸ್ತೆ ಆದಿಶಕ್ತಿ ಶ್ರೀಕ್ಷೇತ್ರ ದೇವಸ್ಥಾನದಲ್ಲಿ ನಡೆದಿದೆ.
ಇತ್ತೀಚೆಗೆ, ಈ ಉಡುಪಿಯ ಪ್ರಸಿದ್ಧ ದೇವಾಲಯವಾದ ಆದಿಶಕ್ತಿ ಮಾತೆಯ ದೇವಾಲಯದ ಹುಂಡಿ ಹಾಗೂ ಕಲ್ಕೂಡ ಕಲ್ಲುರ್ಟಿಯ ಕಾಣಿಕೆ ಡಬ್ಬಿಯ ಹಣವನ್ನೂ ಕಳ್ಳನೋರ್ವ ಹದಿನೈದು ದಿನಗಳಲ್ಲಿ ಎರಡು ಬಾರಿ ಕದ್ದು ಪರಾರಿಯಾಗಿದ್ದ. ಈ ಘಟನೆಯಿಂದ ದೇವಾಲಯದ ಪ್ರಧಾನ ಅರ್ಚಕರು ಹಾಗೂ ಧರ್ಮಾಧಿಕಾರಿಗಳೂ ಆದ ಸುಕುಮಾರ ಮೋಹನ್ ಗುರೂಜಿ ಮತ್ತು ಗ್ರಾಮಸ್ಥರಲ್ಲಿ ಆಘಾತ ಮತ್ತು ಬೇಸರ ಮೂಡಿತ್ತು.
ನಂತರದಲ್ಲಿ ಸುಕುಮಾರ ಮೋಹನ್ ರವರು ಈ ಬಗ್ಗೆ ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಬದಲಾಗಿ ಈ ಹಿಂದೆಯೇ ನಿರ್ಧರಿಸಿದಂತೆ 30/05/2025 ರಂದು ಕಲ್ಲುರ್ಟಿ ದರ್ಶನ ಹಾಗೂ ಕೊರಗಜ್ಜನ “ಹರಕೆಯ ಕೋಲ” ಆಯೋಜನೆಯಾಗಿತ್ತು. ಸುಕುಮಾರ ಮೋಹನ್ ರವರು ತಮ್ಮ ಸಂಪೂರ್ಣ ನಂಬಿಕೆಯನ್ನು ಕಲ್ಲುರ್ಟಿ ಮತ್ತು ಕೊರಗಜ್ಜನ ಮೇಲಿಟ್ಟು, ವಿಶೇಷ ನೇಮ ಹಾಗೂ ಕೊರಗಜ್ಜರ ಕೋಲ ಸೇವೆಯನ್ನು ನಡೆಸಿದರು ಮತ್ತು ದೈವಕ್ಕೆ ಪ್ರಾರ್ಥನೆ ಸಲ್ಲಿಸಿದರು.
ದೈವದ ಪ್ರತಿಜ್ಞೆ
ಕಳವು ಸಂಬಂಧ ದೂರು ಸ್ವೀಕರಿಸಿದ ಕೊರಗಜ್ಜ ‘ಒಂಬತ್ತು ದಿನಗಳ ಒಳಗೆ ಖದೀಮನ ಹೆಡೆಮುರಿ ಕಟ್ಟುವೆ ಎಂದು ಅಭಯ ನೀಡಿತ್ತು. ಭರವಸೆ ನೀಡಿದ ಮೂರೇ ದಿನಗಳೊಳಗೆ ದೈವವು ಕಳ್ಳನ ಚಹರೆ ಪತ್ತೆ ಹಚ್ಚಿ ದಾವಣಗೆರೆಯ ಸಲ್ಮಾನ್ ಎಂಬವನಿಗೆ ಪೊಲೀಸರ ಲಾಠಿ ಏಟಿನ ರುಚಿ ನೋಡುವಂತೆ ಮಾಡಿದೆ.
ಅದ್ಭುತ ಬೆಳವಣಿಗೆ:
ಹೌದು! ನಿಖರವಾಗಿ ಮೂರು ದಿನಗಳೊಳಗೆ ಕಳ್ಳನ ಗುರುತು ಪತ್ತೆಯಾಗಿ, ಗ್ರಾಮಸ್ಥರ ಸಹಕಾರದಿಂದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತನು ತನ್ನ ತಪ್ಪನ್ನೂ ಸಹ ಒಪ್ಪಿಕೊಂಡಿರುವುದರಿಂದ ದೇವಿ ಮತ್ತು ದೈವಗಳ ಮೇಲಿದ್ದ ನಂಬಿಕೆ ಮತ್ತಷ್ಟು ಇಮ್ಮಡಿಗೊಂಡಿದೆ.
ಗ್ರಾಮಸ್ಥರ ಪ್ರತಿಕ್ರಿಯೆ:
“ಇದು ಕೇವಲ ದೇವಾಲಯವಲ್ಲ, ಇದು ಸತ್ಯದ ಸ್ಥಳ. ಇಲ್ಲಿ ದೈವದ ನುಡಿಗಳು ಸುಳ್ಳಾಗುವುದಿಲ್ಲ,” ಎಂದು ಅನೇಕ ಭಕ್ತರು ಹೇಳುತ್ತಿದ್ದಾರೆ.