ಪೋಷಕರಿಗೆ ಗೌರವವೇ ನಿಜವಾದ ಸಮಾಜ ಸೇವೆ : ರವಿ ಕಟಪಾಡಿ
ಯುವಜನತೆಯು ತಮ್ಮ ಪೋಷಕರನ್ನು ಗೌರವ ಮತ್ತು ಕಾಳಜಿಯಿಂದ ನೋಡಿಕೊಳ್ಳುವುದೇ ನಿಜವಾದ ಸಮಾಜ ಸೇವೆ ಎಂದು ಸಮಾಜ ಸೇವಕರಾದ ರವಿ ಕಟಪಾಡಿ ಸಂದೇಶ ನೀಡಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿಯ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಬ್ಯಾಂಕ್ ಆಫ್ ಬರೋಡಾ ಚೇರ್ ಮತ್ತು ವಾಣಿಜ್ಯ ಸಂಘದ ಸಂಯೋಜನೆಯೊಂದಿಗೆ ಪರಿಸರ ಸಂರಕ್ಷಣೆಗಾಗಿ ಯುವೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಪೋಷಕರು ಬಹಳ ಕಷ್ಟದಿಂದ ದುಡಿದು ತಮ್ಮ ಮಕ್ಕಳ ಬೆಳವಣಿಗೆಗಾಗಿ ಜೀವನ ನಡೆಸುತ್ತಾರೆ. ಹಾಗೂ ಮಕ್ಕಳು ಕೆಟ್ಟದಾರಿ ತುಳಿಯಬಾರದು ಎನ್ನುವ ದೃಷ್ಟಿಯಿಂದ ಮಾರ್ಗದರ್ಶನ ನೀಡುತ್ತಲೇ ಇರುತ್ತಾರೆ. ಇದರಿಂದ ಯುವಜನತೆ ಒಳ್ಳೆಯ ಸಂಸ್ಕಾರ, ಆಚಾರ-ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಹಂಚಿ ತಿನ್ನುವ ಮನೋಭಾವ, ತ್ರಪ್ತಿದಾಯಕ ಜೀವನಕ್ಕಾಗಿ ಸಣ್ಣ ಸಣ್ಣ ರೀತಿಯಲ್ಲಿ ತಮ್ಮದ ಆದ ನೆಲೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳುತ್ತಾ ಆತ್ಮವಿಶ್ವಾಸ ಮತ್ತು ಸಂತೋಷವಾಗಿರಲು ಎಲ್ಲರೂ ಪ್ರಯತ್ನಿಸಬೇಕು. ಯುವ ಜನತೆಯು ದಾರಿ ತಪ್ಪದಂತೆ ಮೌಲ್ಯಯುತ ಹಾಗೂ ಒಳ್ಳೆಯ ಶಿಕ್ಷಣ, ಉದ್ಯೋಗ ಮತ್ತು ಸಮಾಜ ಸೇವೆಯಲ್ಲಿ ನಿರತರಾಗಿದ್ದರೆ ನಾವು ಮತ್ತು ನಮ್ಮ ಸುತ್ತಮುತ್ತಲಿನ ಸಮಾಜವು ಪ್ರಗತಿಯತ್ತ ಹೆಜ್ಜೆ ಹಾಕುತ್ತದೆ ಎನ್ನುತ್ತಾ ವಿದ್ಯಾರ್ಥಿಗಳಿಗೆ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡು ಸ್ಪೂರ್ತಿದಾಯಕವಾದ ಮಾತುಗಳನ್ನಾಡಿದರು.
ಅತಿಥಿಗಳಾದ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಪ್ರಶಾಂತ ನಾಯ್ಕ್ ಮಾತನಾಡುತ್ತಾ ನಮ್ಮಲ್ಲಿ ಪರಿಸರದ ಬಗ್ಗೆ ಹೆಚ್ಚು ಪ್ರಜ್ಞಾವಂತರಾಗಬೇಕು. ಗಿಡಗಳ ನೆಡುವುದು, ನೀರಿನ ಸಂರಕ್ಷಣೆ, ಪ್ಲಾಸ್ಟಿಕ್ ನಿಷೇಧ ಇತ್ಯಾದಿ ಜವಾಬ್ದಾರಿಗಳನ್ನು ಪ್ರತಿಯೊಬ್ಬರು ನಿಷ್ಠೆಯಿಂದ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ನುಡಿದರು.

ಇನ್ನೋರ್ವ ಅತಿಥಿಗಳಾದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ಮಾತನಾಡುತ್ತಾ ಸಮಾಜ ಸೇವೆಗೆ ಸೃಜನಾತ್ಮಕವಾಗಿ ಯೋಚಿಸಿದಾಗ ಬಹಳಷ್ಟು ಮಾದರಿಗಳು ಸಿಗುತ್ತವೆ. ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಬಗ್ಗೆ ಹೃದಯ ಮತ್ತು ಸಂವೇದನೆ ಬಹಳ ದೊಡ್ಡದು. ಸಮಾಜದ ಸಂತೋಷಕ್ಕಾಗಿ ನಮ್ಮನ್ನು ನಾವು ಅರ್ಪಿಸಿಕೊಳ್ಳುವುದು ಮಹತ್ತರವಾದ ಕೆಲಸವಾಗಿದೆ. ವಿವಿಧ ಧರ್ಮ, ಜಾತಿ, ಭಾಷೆ, ಆಚಾರ- ವಿಚಾರ ಉಡುಗೆ ತೊಡುಗೆ ಇತ್ಯಾದಿಗಳಿಂದ ಕೂಡಿದ ಬಹುರೂಪವಾದ ವೈವಿಧ್ಯತೆಯಿಂದ ನಾವೆಲ್ಲರೂ ಬದುಕುತ್ತಿದ್ದೇವೆ ಎಂದರು.
ಈ ಜಗತ್ತು ಪ್ರಕೃತಿ ಕೇಂದ್ರವಾಗಿದೆ ಮನುಷ್ಯ, ಪ್ರಾಣಿ, ಪಕ್ಷಿ ಗಿಡ ಮರಗಳು ಕಾಡು ಇತ್ಯಾದಿ ಎಲ್ಲಾ ಜೀವ ಸಂಕುಲಗಳಿಗೆ ಜೀವಿಸುವ ಹಕ್ಕಿದೆ. ಪ್ರಕೃತಿ ಅಸಮತೋಲನವು ದಿನನಿತ್ಯವೂ ನಮ್ಮೆಲ್ಲರನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಗಿಡಗಳನ್ನು ನೆಡುವುದು ಮತ್ತು ಪರಿಸರ ಸಂರಕ್ಷಣೆಯಲ್ಲಿ ನಾವೆಲ್ಲರೂ ಇವತ್ತಿನಿಂದಲೇ ಸನ್ನದ್ಧರಾಗುತ್ತೇವೆ ಎಂದು ಪ್ರತಿಜ್ಞೆ ಕೈಗೊಳ್ಳಬೇಕು. ಮುಂದಿನ ತಲೆಮಾರಿಗೆ ಪ್ರಕೃತಿಯನ್ನು ಉಳಿಸಿಕೊಳ್ಳಬೇಕು. ಮುಖ್ಯವಾಗಿ ಪ್ಲಾಸ್ಟಿಕ್ ನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಹಾಗೂ ಕೊಳ್ಳುಬಾಕ ಸಂಸ್ಕೃತಿಯಿಂದ ಹೆಚ್ಚು ಹೆಚ್ಚು ವಸ್ತುಗಳನ್ನು ಖರೀದಿಸುತ್ತಾ ಹಣ, ಸಮಯ ಮತ್ತು ಶ್ರಮವನ್ನು ಹಾಳು ಮಾಡುತ್ತಿದ್ದೇವೆ. ಈಗಾಗಲೇ ಖರೀದಿಸಿರುವ ಬೇಡವಾದ ವಸ್ತುಗಳನ್ನು ಮರುಬಳಕೆ ಮಾಡುವ ಜೀವನಕ್ಕೆ ನಾವೆಲ್ಲರೂ ಒಗ್ಗಿಕೊಳ್ಳಬೇಕು. ಇನ್ನೊಬ್ಬರಿಗೆ ಪ್ರೇರಣೆಯಾಗುವ ಕೆಲಸದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕು. ಪ್ರಕೃತಿಗೆ ತೊಂದರೆಯಾಗದ ರೀತಿಯಲ್ಲಿ ನಮ್ಮ ಕೆಲಸದಲ್ಲಿ ತಲ್ಲಿನರಾಗಬೇಕು. ಹೀಗೆ ನಮ್ಮಲ್ಲಿ ಸಂಸ್ಕೃತಿ, ಸಮಾಜ ಸೇವೆ ಮತ್ತು ಪರಿಸರ ಸಂರಕ್ಷಣೆಯನ್ನು ಮುಂದಿನ ಪೀಳಿಗೆಗೆ ಸಾಗಿಸುವಲ್ಲಿ ನಾವೆಲ್ಲರೂ ಕೈಜೋಡಿಸೋಣ ಎಂದು ಆಶಿಸಿದರು.
ಸಮಾಜ ಸೇವಕರಾದ ರವಿ ಕಟಪಾಡಿಯವರನ್ನು ವಾಣಿಜ್ಯ ಸಂಘದ ವತಿಯಿಂದ ಸನ್ಮಾನಿಸಲಾಯಿತು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಪ್ರೀತಿ ಕೀರ್ತಿ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ಈಶ್ವರ ಪಿ, ಡಾ. ವೇದವ ಪಿ. ಮತ್ತು ಡಾ. ಪರಮೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ದಿನಕರ ಕೆಂಜೂರು, ರಶ್ನಿತಾ ಆರ್. ಕೋಟ್ಯಾನ್, ಗುರುರಾಜ್ ಪಿ. ವೈಶಾಲಿ ಕೆ, ಸಿ. ಲಹರಿ ಮತ್ತು ರಮ್ಯ ರಾಮಚಂದ್ರ ನಾಯ್ಕ್ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.
ವಿದ್ಯಾರ್ಥಿನಿಗಳಾದ ದಿವ್ಯ ಕ್ರಾಸ್ಟ್ ಡಿ. ಸ್ವಾಗತಿಸಿದರು. ಗುಣವತಿ ವಂದಿಸಿದರು. ಅನುಷಾ, ಕಾವ್ಯ ಪಿ.ಆರ್ ಮತ್ತು ಯೋಗೇಶ್ವರಿ ಪ್ರಾರ್ಥಿಸಿದರು. ಸಮೃದ್ಧಿ ಕಾರ್ಯಕ್ರಮ ನಿರೂಪಿಸಿದರು.