ಬಂಟ್ವಾಳ| ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ, ವಿದ್ಯಾಗಿರಿ, ಬಂಟ್ವಾಳ ಇದರ ವತಿಯಿಂದ ಸಂಘದ ಸದಸ್ಯ ರಾಘವೇಂದ್ರ ಕೂಡಿಗೆ ಶೆಣೈ ಅವರು ತನ್ನ ತಾಯಿ ಸವಿತಾ ಪಾಂಡುರAಗ ಶೆಣೈ ಅವರ ಸ್ಮರಣಾರ್ಥ ಶ್ರೀ ವೆಂಕಟರಮಣ ಸ್ವಾಮೀ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮಧ್ಯಾಹ್ನದ ಉಚಿತ ಬಿಸಿಯೂಟ ಯೋಜನೆ-2025ಗೆ ದೇಣಿಗೆ ನೀಡಿದರು.
ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾಸಂಸ್ಥೆಗಳು, ವಿದ್ಯಾಗಿರಿ ಬಂಟ್ವಾಳ ಇದರ ಸಂಚಾಲಕಿ ಕೆ. ರೇಖಾ ಶೆಣೈ ಅವರು ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿ, ಮಧ್ಯಾಹ್ನದ ಉಚಿತ ಬಿಸಿಯೂಟ ಯೋಜನೆ-2025ರ ಫಲಾನುಭವಿ ವಿದ್ಯಾರ್ಥಿಗಳಿಗೆ ಕಾರ್ಡ್ ವಿತರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ಕರ‍್ಯಕ್ರಮದಲ್ಲಿ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ಬಂಟ್ವಾಳ ಇದರ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಶಿವಣ್ಣ ಪ್ರಭು ಕೆ ಮಾತನಾಡಿ, ಸಮಾಜದ ವಿವಿಧ ನೆಲೆಗಳಿಂದ ವಿದ್ಯಾರ್ಥಿಗಳು ಶಿಕ್ಷಣವನ್ನರಸಿಕೊಂಡು ಶಿಕ್ಷಣ ಸಂಸ್ಥೆಗಳಿಗೆ ಬರುತ್ತಾರೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುವುದು ಶಿಕ್ಷಣ ಕೇಂದ್ರಗಳ ಜವಾಬ್ದಾರಿ. ಕಲಿಕೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗೆ ತಾನು ಕಲಿಯುವ ಪರಿಸರವೂ ಪರಿಣಾಮ ಬೀರುತ್ತದೆ. ಮನೆಯ ಪರಿಸರ, ಸ್ಥಿತಿಗತಿಗಳೂ ಸಹ ವಿದ್ಯಾರ್ಥಿಯ ಕಲಿಕೆಗೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕಲಿಕೆಯಲ್ಲಿ ಮುಂದೆ ಇದ್ದರೂ ಎಷ್ಟೋ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಕುಟುಂಬದ ಆರ್ಥಿಕ ಸ್ಥಿತಿಗತಿ ಶಿಕ್ಷಣವನ್ನು ಮುಂದುವರೆಸಲು ತೊಡಕಾಗಿ ಪರಿಣಮಿಸುತ್ತದೆ. ಈ ನಿಟ್ಟಿನಲ್ಲಿ ಕಾಲೇಜು ಆಡಳಿತಮಂಡಳಿಯು ಜ್ಞಾನದ ಹಸಿವನ್ನು ನೀಗಿಸುವ ಜತಜತೆಯಲ್ಲಿ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ಅರಿತುಕೊಂಡು ಹೊಟ್ಟೆಯ ಹಸಿವನ್ನು ನೀಗಿಸುವ ಕೆಲಸ ಮಾಡಿರುವುದು ಅಭಿನಂದನೀಯ ಎಂದು ಹೇಳಿದರು.
ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶಶಿಧರ್ ಎಸ್. ಫಲಾನುಭವಿ ವಿದ್ಯಾರ್ಥಿಗಳ ಹೆಸರು ವಾಚಿಸಿದರು. ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ್ ಬಿ. ಸ್ವಾಗತಿಸಿದರು. ಉಪಪ್ರಾಂಶುಪಾಲ ಲೆಪ್ಟಿನೆಂಟ್ ಪ್ರದೀಪ್ ಪೂಜಾರಿ ವಂದಿಸಿ, ಸಂಸ್ಕೃತ ಉಪನ್ಯಾಸಕ ಗಣೇಶ್ ಕರ‍್ಯಕ್ರಮ ನಿರೂಪಿಸಿದರು.