ಸಾಕುಪ್ರಾಣಿಗಳು ಯಾವುದೇ ಆಗಿರಲಿ ಅವುಗಳು ಅನೇಕ ಕುಟುಂಬಗಳಲ್ಲಿ ಕುಟುಂಬದ ಸದಸ್ಯರಂತಾಗಿರುತ್ತವೆ. ಅವುಗಳಿಗೆ ತುಸು ನೋವು ಗಾಯ ಆದರೂ ಅದನ್ನು ಸಾಕುವವರಿಗೆ ಸಹಿಸಲಾಗದು. ಅವುಗಳೇನಾದರೂ ಪ್ರಾಣ ಬಿಟ್ಟರೆ ಆಗುವ ನೋವು ಅಷ್ಟಿಷ್ಟಲ್ಲ, ಕೆಲವರು ಸಾಕುಪ್ರಾಣಿಗಳ ನೋವಿನಿಂದ ಹೊರಬರಲಾಗದೆ ಖಿನ್ನತೆಗೆ ಜಾರಿದ ಘಟನೆಗಳು ಇವೆ. ಬಹುತೇಕರು ಅನಾರೋಗ್ಯಕ್ಕೊಳಗಾದ ತಮ್ಮ ಪ್ರಾಣಿಗಳನ್ನು ಉಳಿಸಿಕೊಳ್ಳುವುದಕ್ಕೆ ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಪುಟ್ಟ ಬಾಲಕನೋರ್ವ ಗಾಯಗೊಂಡು ರೆಕ್ಕೆ ಮುರಿತಕ್ಕೊಳಗಾಗಿದ್ದ ಪಾರಿವಾಳವನ್ನು ಅಳುತ್ತಾ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾನೆ. ಆದರೆ ಜಿಲ್ಲಾಸ್ಪತ್ರೆಯಲ್ಲಿ ಆ ಹಕ್ಕಿ ಸಾವನ್ನಪ್ಪಿದ್ದು, ಬಾಲಕ ಬಿಕ್ಕಿ ಬಿಕ್ಕಿ ಅಳುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಅಂದಹಾಗೆ ಅರುಣಾಚಲ ಪ್ರದೇಶದ ಜಿಲ್ಲಾಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಪುಟ್ಟ ಹಕ್ಕಿಯ ಮೇಲಿನ ಬಾಲಕನ ಪ್ರೀತಿಗೆ ಅನೇಕರು ಭಾವುಕರಾಗಿದ್ದಾರೆ. ಅರುಣಾಚಲ ಪ್ರದೇಶ ಲೋಂಗ್ಡಿಂಗ್‌ನಲ್ಲಿ ಈ ಘಟನೆ ನಡೆದಿದ್ದು, ಪುಟ್ಟ ಬಾಲಕ ಪರಿವಾಳವೊಂದನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಈ ಪಾರಿವಾಳದ ರೆಕ್ಕೆ ಮುರಿದಿತ್ತು, ಬಾಲಕ ಅಳುತ್ತಲೇ ಅದನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿದ್ದ ಸಿಬ್ಬಂದಿ ಅದನ್ನು ಒಂದು ಮರದ ಸ್ಟೂಲ್ ಮೇಲೆ ಇಡಲು ಹೇಳಿದ್ದು, ಅದನ್ನುಸ್ವಚ್ಛ ಮಾಡಬೇಕು ನಂತರ ಔಷಧಿ ನೀಡೋಣ ಎಂದು ಹೇಳಿ ಬಾಲಕನನ್ನು ಪಕ್ಕದಲ್ಲೇ ಇದ್ದ ಚೇರ್‌ನಲ್ಲಿ ಕುಳಿತುಕೊಳ್ಳಲು ಹೇಳಿದ್ದಾರೆ.
ಆ ಬಾಲಕ ಪಾರಿವಾಳವನ್ನು ಆ ಸ್ಟೂಲ್ ಮೇಲೆ ಇಟ್ಟು ಅಲ್ಲೇ ಆತಂಕದಲ್ಲೇ ನಿಂತಿದ್ದಾನೆ. ಅಷ್ಟರಲ್ಲಿ ಆ ಪಾರಿವಾಳದ ಜೀವ ಹೋಗಿದ್ದು, ಅದು ಸತ್ತೊಯ್ತಾ? ಏನು ಎಂದು ಕೇಳುತ್ತಾ ಬಾಲಕ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಅಲ್ಲಿದವರು ಹೌದು ಸತ್ತೊಯ್ತು ಎಂದು ಹೇಳಿ ಬಾಲಕನಿಗೆ ಅಳಬೇಡ ಎಂದು ಹೇಳಿ ಸಮಾಧಾನಿಸಲು ಯತ್ನಿಸಿದ್ದಾರೆ. ಆದರೆ ಈ ಪುಟ್ಟ ಬಾಲಕನ ಕಣ್ಣಿಂದ ನೀರು ಇಳಿಯೋದು ಮಾತ್ರ ನಿಂತಿಲ್ಲ, ಈ ವೀಡಿಯೋ ಅನೇಕರನ್ನು ಭಾವುಕರನ್ನಾಗಿಸಿದೆ.

