ಪ್ರಿಯದರ್ಶಿನಿ ಸೊಸೈಟಿ ಇನ್ನಷ್ಟು ಸ್ನೇಹಪರವಾಗಿ ಬೆಳೆಯಲಿ: ವಾಸುದೇವ ಪಿ. ನಾಯಕ್

0
2

ಮೂಡುಬಿದಿರೆ : ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯು ಮೂಡುಬಿದಿರೆಯಲ್ಲಿ ಒಂದು ವರ್ಷದ ಹಿಂದೆ ಶಾಖೆಯನ್ನು ಪ್ರಾರಂಭಿಸಿ, ಅಲ್ಪಾವಧಿಯಲ್ಲೇ ಜನಮೆಚ್ಚುಗೆ ಗಳಿಸಿ ಸ್ನೇಹಪರ ಶಾಖೆಯಾಗಿ ಗುರುತಿಸಿಕೊಂಡಿದೆ. ಸಿಬ್ಬಂದಿಗಳ ನಗುಮುಖದ ಸೇವೆ ಸಂಸ್ಥೆಯ ಅಭಿವೃದ್ಧಿಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಮಿತ್ತಬೈಲು ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ವಾಸುದೇವ ಪಿ. ನಾಯಕ್ ಹೇಳಿದರು.

ಅವರು ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಮೂಡುಬಿದಿರೆ ಶಾಖೆಯಲ್ಲಿ ನಡೆದ ಸಹಕಾರ ಸಪ್ತಾಹ 2026ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಮೂಡುಬಿದಿರೆ ಶಾಖೆಯ ಹಿರಿಯ ವ್ಯವಸ್ಥಾಪಕಿ ನೀತು ಜೈನ್ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಕೃಷ್ಣ ಎಂ. ಶೆಟ್ಟಿ, ನಿವೃತ್ತ ವಿಜಯ ಬ್ಯಾಂಕ್ ವ್ಯವಸ್ಥಾಪಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಆಳ್ವಾಸ್ ಸಹಕಾರಿ ಸಂಘ ನಿಯಮಿತ, ಮೂಡುಬಿದಿರೆ ಹಾಗೂ ಜನರಲ್ ಮ್ಯಾನೇಜರ್, ಬಂಟ್ಸ್ ಕೋ-ಆಪರೇಟಿವ್ ಸೊಸೈಟಿ, ಕಾರ್ಕಳ; ಜಾರ್ಜ್ ಮೊನಿಸ್, ನಿರ್ದೇಶಕರು, ಎಂಸಿಎಸ್ ಬ್ಯಾಂಕ್, ಮೂಡುಬಿದಿರೆ; ಹಾಗೂ ಎಂ. ಪುರುಷೋತ್ತಮ ಶೆಟ್ಟಿ, ನಿವೃತ್ತ ವ್ಯವಸ್ಥಾಪಕರು, ಕಲ್ಲಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಇವರನ್ನು ಸೊಸೈಟಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲ್ಲಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತದ ನಿವೃತ್ತ ವ್ಯವಸ್ಥಾಪಕ ಎಂ. ಪುರುಷೋತ್ತಮ ಶೆಟ್ಟಿ, ಸಹಕಾರಿ ರಂಗದಲ್ಲಿ ನಂಬಿಕೆ ಮತ್ತು ವಿಶ್ವಾಸಕ್ಕೆ ಅಗ್ರಸ್ಥಾನವಿದೆ. ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸವನ್ನು ಇನ್ನಷ್ಟು ಕಾಪಾಡಿಕೊಂಡು ಮುನ್ನಡೆದರೆ ಸಹಕಾರಿ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೊಸೈಟಿಯ ಅಧ್ಯಕ್ಷರಾದ ಸಹಕಾರ ರತ್ನ ವಸಂತ್ ಬೆರ್ನಾರ್ಡ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಮೂಡುಬಿದಿರೆ ಶಾಖಾ ಪ್ರಬಂಧಕಿ ಅಭೀಷ್ಠಾ ಜೈನ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ ವಂದಿಸಿದರು. ವಿನೀತಾ ವಿಲ್ಮಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.