ಬೆಂಗಳೂರಿನ ನೆಬಿಲೊ ಟೆಕ್ನಾಲಜೀಸ್ ಪ್ರೈ.ಲಿ.ನ ಸರ್ವರ್ ಹ್ಯಾಕ್ ಮಾಡಿ 378 ಕೋಟಿ ರೂ. ಕಳವು!

0
138

ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣ ಬೆಳಕಿಗೆ

ಬೆಂಗಳೂರು: ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣವೊಂದು ಬೆಂಗಳೂರಿನ ವೈಟ್​ಫೀಲ್ಡ್​ನಲ್ಲಿ ಬೆಳಕಿಗೆ ಬಂದಿದೆ. ದೇಶದ ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಕಂಪನಿಯಾದ ನೆಬಿಲೊ ಟೆಕ್ನಾಲಜೀಸ್ ಪ್ರೈವೇಟ್​ ಲಿ.ನ ಸರ್ವರ್ ಹ್ಯಾಕ್ ಮಾಡಿ, ಸೈಬರ್​ ಖದೀಮರು 378 ಕೋಟಿ ರೂಪಾಯಿ ಕಳವು ಮಾಡಿದ್ದಾರೆ. ಪ್ರಕರಣ ಸಂಬಂಧ ವೈಟ್​​ಫೀಲ್ಡ್ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ನೆಬಿಲೊ ಟೆಕ್ನಾಲಜೀಸ್ ಕಂಪನಿ ನೌಕರ ರಾಹುಲ್ ಅಗರ್ವಾಲ್ ಎಂಬುವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸೈಬರ್​ ಕ್ರೈಂ ಪೊಲೀಸರು ರಾಹುಲ್​ನ ಲ್ಯಾಪ್​ಟಾಪ್​ ವಶಕ್ಕೆ ಪಡೆದು ತಪಾಸಣೆ ನಡೆಸುತ್ತಿದ್ದಾರೆ.

ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕ್ರಿಪ್ಟೊ ಕರೆನ್ಸಿ ಎಕ್ಸಚೇಂಜ್ ಮಾಡುವ ಫ್ಲಾಟ್ ಫಾರಂ ಆಗಿದೆ. ಸೈಬರ್ ವಂಚಕರು ಎರಡು ಬಾರಿ ಸರ್ವರ್​ ಹ್ಯಾಕ್​ ಮಾಡಿದ್ದಾರೆ. ಮೊದಲಿಗೆ ನಸುಕಿನ ಜಾವ 2:37ಕ್ಕೆ ಕಂಪನಿಯ ಸರ್ವರ್ ಹ್ಯಾಕ್​ ಮಾಡಿ, ವ್ಯಾಲೆಟ್​ನಿಂದ​ 1 USDT ಅನ್ನು ಮತ್ತೊಂದು ವ್ಯಾಲೆಟ್​ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ನಂತರ, ಬೆಳಗ್ಗೆ 9:40 ಮತ್ತೆ ಸರ್ವರ್​ ಹ್ಯಾಕ್​ ಮಾಡಿ, ವ್ಯಾಲೆಟ್​ನಿಂದ 44 ಮಿಲಿಯನ್ USDT (ಅಂದಾಜು 3,78,00,00,000 ರೂಪಾಯಿ) ವರ್ಗಾವಣೆ ಮಾಡಿಕೊಂಡಿದ್ದಾರೆ.

ಸರ್ವರ್ ಹ್ಯಾಕ್​ ಮಾಡಿದ್ದು ಹೇಗೆ?

ಹಣ ಕಳವು ಆಗುತ್ತಿದ್ದಂತೆ, ನೆಬಿಲೊ ಟೆಕ್ನಾಲಜಿಸ್ ಕಂಪನಿ ಆಂತರಿಕ ತನಿಖೆ ನಡೆಸಿತ್ತು. ತನಿಖೆ ವೇಳೆ ತನ್ನದೇ ಕಂಪನಿಯ ನೌಕರ ರಾಹುಲ್ ಅಗರ್ವಾಲ್​ ಅವರ ಲ್ಯಾಪ್​ಟ್ಯಾಪ್​ ಮೂಲಕ ಸರ್ವರ್​ ಹ್ಯಾಕ್​ ಮಾಡಲಾಗಿದೆ ಎಂಬುವುದು ಗೊತ್ತಾಗಿದೆ. ರಾಹುಲ್​ ಅಗರ್ವಾಲ್​ ಅವರು ಕಂಪನಿ ನೀಡಿದ ಲ್ಯಾಪ್​ಟಾಟ್​ ಬಳಸಿಕೊಂಡು ಮತ್ತೊಂದು ಕಂಪನಿಯಲ್ಲಿ ಪಾರ್ಟಟೈಮ್ ಕೆಲಸ ಮಾಡಿದ್ದರು. ರಾಹುಲ್​ ಅಗರ್ವಾಲ್​ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡಿ 15 ಲಕ್ಷ ರೂ. ಹಣ ಪಡೆಯುತ್ತಿದ್ದರು. ರಾಹುಲ್​ ಅಗರ್ವಾಲ್ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಸೈಬರ್ ವಂಚಕರು ಇವರ ಲ್ಯಾಪ್​ಟಾಪ್ ಹ್ಯಾಕ್ ಮಾಡಿ ಸರ್ವರ್​ಗೆ ಎಂಟ್ರಿಯಾಗಿ, 44 ಮಿಲಿಯನ್ ಡಾಲರ್ ದೋಚಿದ್ದಾರೆ.

LEAVE A REPLY

Please enter your comment!
Please enter your name here