ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣ ಬೆಳಕಿಗೆ
ಬೆಂಗಳೂರು: ಕರ್ನಾಟಕ ಇತಿಹಾಸದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣವೊಂದು ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ಬೆಳಕಿಗೆ ಬಂದಿದೆ. ದೇಶದ ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಕಂಪನಿಯಾದ ನೆಬಿಲೊ ಟೆಕ್ನಾಲಜೀಸ್ ಪ್ರೈವೇಟ್ ಲಿ.ನ ಸರ್ವರ್ ಹ್ಯಾಕ್ ಮಾಡಿ, ಸೈಬರ್ ಖದೀಮರು 378 ಕೋಟಿ ರೂಪಾಯಿ ಕಳವು ಮಾಡಿದ್ದಾರೆ. ಪ್ರಕರಣ ಸಂಬಂಧ ವೈಟ್ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ನೆಬಿಲೊ ಟೆಕ್ನಾಲಜೀಸ್ ಕಂಪನಿ ನೌಕರ ರಾಹುಲ್ ಅಗರ್ವಾಲ್ ಎಂಬುವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸೈಬರ್ ಕ್ರೈಂ ಪೊಲೀಸರು ರಾಹುಲ್ನ ಲ್ಯಾಪ್ಟಾಪ್ ವಶಕ್ಕೆ ಪಡೆದು ತಪಾಸಣೆ ನಡೆಸುತ್ತಿದ್ದಾರೆ.
ನೆಬಿಲೊ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕ್ರಿಪ್ಟೊ ಕರೆನ್ಸಿ ಎಕ್ಸಚೇಂಜ್ ಮಾಡುವ ಫ್ಲಾಟ್ ಫಾರಂ ಆಗಿದೆ. ಸೈಬರ್ ವಂಚಕರು ಎರಡು ಬಾರಿ ಸರ್ವರ್ ಹ್ಯಾಕ್ ಮಾಡಿದ್ದಾರೆ. ಮೊದಲಿಗೆ ನಸುಕಿನ ಜಾವ 2:37ಕ್ಕೆ ಕಂಪನಿಯ ಸರ್ವರ್ ಹ್ಯಾಕ್ ಮಾಡಿ, ವ್ಯಾಲೆಟ್ನಿಂದ 1 USDT ಅನ್ನು ಮತ್ತೊಂದು ವ್ಯಾಲೆಟ್ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ನಂತರ, ಬೆಳಗ್ಗೆ 9:40 ಮತ್ತೆ ಸರ್ವರ್ ಹ್ಯಾಕ್ ಮಾಡಿ, ವ್ಯಾಲೆಟ್ನಿಂದ 44 ಮಿಲಿಯನ್ USDT (ಅಂದಾಜು 3,78,00,00,000 ರೂಪಾಯಿ) ವರ್ಗಾವಣೆ ಮಾಡಿಕೊಂಡಿದ್ದಾರೆ.
ಸರ್ವರ್ ಹ್ಯಾಕ್ ಮಾಡಿದ್ದು ಹೇಗೆ?
ಹಣ ಕಳವು ಆಗುತ್ತಿದ್ದಂತೆ, ನೆಬಿಲೊ ಟೆಕ್ನಾಲಜಿಸ್ ಕಂಪನಿ ಆಂತರಿಕ ತನಿಖೆ ನಡೆಸಿತ್ತು. ತನಿಖೆ ವೇಳೆ ತನ್ನದೇ ಕಂಪನಿಯ ನೌಕರ ರಾಹುಲ್ ಅಗರ್ವಾಲ್ ಅವರ ಲ್ಯಾಪ್ಟ್ಯಾಪ್ ಮೂಲಕ ಸರ್ವರ್ ಹ್ಯಾಕ್ ಮಾಡಲಾಗಿದೆ ಎಂಬುವುದು ಗೊತ್ತಾಗಿದೆ. ರಾಹುಲ್ ಅಗರ್ವಾಲ್ ಅವರು ಕಂಪನಿ ನೀಡಿದ ಲ್ಯಾಪ್ಟಾಟ್ ಬಳಸಿಕೊಂಡು ಮತ್ತೊಂದು ಕಂಪನಿಯಲ್ಲಿ ಪಾರ್ಟಟೈಮ್ ಕೆಲಸ ಮಾಡಿದ್ದರು. ರಾಹುಲ್ ಅಗರ್ವಾಲ್ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡಿ 15 ಲಕ್ಷ ರೂ. ಹಣ ಪಡೆಯುತ್ತಿದ್ದರು. ರಾಹುಲ್ ಅಗರ್ವಾಲ್ ಮತ್ತೊಂದು ಕಂಪನಿಯಲ್ಲಿ ಕೆಲಸ ಮಾಡುವ ವೇಳೆ ಸೈಬರ್ ವಂಚಕರು ಇವರ ಲ್ಯಾಪ್ಟಾಪ್ ಹ್ಯಾಕ್ ಮಾಡಿ ಸರ್ವರ್ಗೆ ಎಂಟ್ರಿಯಾಗಿ, 44 ಮಿಲಿಯನ್ ಡಾಲರ್ ದೋಚಿದ್ದಾರೆ.

