ಉಜಿರೆ: ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಬಿ. ನರೇಂದ್ರಕುಮಾರ್ ಆಗೋಸ್ಟ್ ೪ ರಂದು ನಿಧನರಾಗಿದ್ದು ಅವರ ಆತ್ಮಶಾಂತಿಗಾಗಿ ಆಗೋಸ್ಟ್ ೨೦ ರಂದು ಬುಧವಾರ ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥ ಕ್ಷೇತ್ರದಲ್ಲಿ ಭಗವಾನ್ ಶಾಂತಿನಾಥಸ್ವಾಮಿ ಸನ್ನಿಧಿಯಲ್ಲಿ ೨೧೬ ಕಲಶ ಅಭಿಷೇಕ ಮತ್ತು ಪಂಚಾಮೃತ ಅಭಿಷೇಕ ನಡೆಯಿತು.
ಯಕ್ಷಜಿನಗಾನ ನಮನ: ಖ್ಯಾತ ಯಕ್ಷಗಾನ ಭಾಗವತರುಗಳಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು, ಚಂದ್ರಶೇಖರ ಆಚಾರ್, ಕುಮಾರಿ ಸಿಂಚನಾ ಮೂಡುಕೋಡಿ ಸುಶ್ರಾವ್ಯವಾಗಿ ಜಿನಭಕ್ತಿಗೀತೆಗಳನ್ನು ಯಕ್ಷಗಾನ ಶೈಲಿಯಲ್ಲಿ ಹಾಡಿದರು.
ಕಾವ್ಯಶ್ರೀ ಅಜೇರು ಅವರಿಂದ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಆರಂಭವಾದ ಯಕ್ಷಜಿನಗಾನ ನಮನದಲ್ಲಿ ಉದಯರಾಗ, ಭಗವಾನ್ ಚಂದ್ರನಾಥಸ್ವಾಮಿ ಸ್ತುತಿ, ಜಿನವಾಣಿ ಸ್ತುತಿ, ಶಾಂತಿನಾಥಸ್ವಾಮಿ ಸ್ತುತಿ, ಪಂಚಪರಮೇಷ್ಠಿಗಳ ಸ್ತುತಿ, ಯಕ್ಷಜಿನಗಾನಗಳನ್ನು ಕಲಾವಿದರು ಸುಶ್ರಾವ್ಯವಾಗಿ ಸಾದರಪಡಿಸಿದರು.
ಹಿಮ್ಮೇಳದಲ್ಲಿ ಚೆಂಡೆ, ಮದ್ದಳೆ ವಾದನದಲ್ಲಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಬಿ. ಜನಾರ್ದನ ತೋಳ್ಪಾಡಿತ್ತಾಯ, ದೇವಾನಂದ ಭಟ್ ಮತ್ತು ಚಂದ್ರಶೇಖರ ಭಟ್ ಸಹಕರಿಸಿದರು.
ನಿವೃತ್ತ ತಹಶೀಲ್ದಾರ್ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾದ ಉಜಿರೆಯ ಸುರೇಶ್ ಕುದ್ರೆಂತಾಯ ದಿವಂಗತ ನರೇಂದ್ರ ಕುಮಾರ್ ಜೀವನ-ಸಾಧನೆ ಬಗ್ಯೆ ಸ್ಥಳದಲ್ಲೆ ಕವನ ಒಂದನ್ನು ರಚಿಸಿ ಯಕ್ಷಗಾನ ಶೈಲಿಯಲ್ಲಿ ಹಾಡಿದರು.
ನಿವೃತ್ತ ಮುಖ್ಯೋಪಾಧ್ಯಾಯ ಉಜಿರೆಯ ಸೋಮಶೇಖರ ಶೆಟ್ಟಿ ದಿವಂಗತ ನರೇಂದ್ರ ಕುಮಾರ್ ಕ್ರೀಡೆ, ಯಕ್ಷಗಾನ, ಎನ್.ಸಿ.ಸಿ. ಮತ್ತು ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಧನ್ಯತೆಯಿಂದ ಸ್ಮರಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.
ಕೊನೆಯಲ್ಲಿ ಒಂಬತ್ತು ಬಾರಿ ಪಂಚನಮಸ್ಕಾರ ಮಂತ್ರವನ್ನು ಸಾಮೂಹಿಕ ಪಠಣ ಮಾಡಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಲಾಯಿತು.
ಡಾ. ಶೃತಕೀತಿರಾಜ ಮತ್ತು ಸಿದ್ಧಾಂತಕೀರ್ತಿ ರಾಜ, ಸಹೋದರಿ ಹಾಗೂ ಕುಟುಂಬಸ್ಥರು ಸಮಾರಂಭದ ಯಶಸ್ವಿಗೆ ಸಹಕರಿಸಿದರು.
ಮುನಿರಾಜ ರೆಂಜಾಳ ಕಾರ್ಯಕ್ರಮ ನಿರ್ವಹಿಸಿದರು.
Home Uncategorized ಕೀರ್ತಿಶೇಷ ಶಿರ್ತಾಡಿಬೀಡು ನರೇಂದ್ರಕುಮಾರ್ ಸ್ಮರಣಾರ್ಥ ಬಸದಿಯಲ್ಲಿ ವಿಶೇಷ ಪೂಜೆ, ಯಕ್ಷಜಿನಗಾನ ವೈಭವ

