ಹೇರೂರು ಬಳಿ ಹೆದ್ದಾರಿಗೆ ಬಾಗಿಕೊಂಡ ಅಪಾಯಕಾರಿ ಮರ : ತುರ್ತು ತೆರವಿಗೆ ಸಾಮಾಜಿಕ ಕಾರ್ಯಕರ್ತ ಸತೀಶ್‌ ಪೂಜಾರಿ ಕೀಳಂಜೆ ಆಗ್ರಹ

0
11

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬ್ರಹ್ಮಾವರದಿಂದ ಉಡುಪಿ ಕಡೆಗೆ ಸಂಚರಿಸುವ ಮಾರ್ಗದ ಹೇರೂರು ಕರಾವಳಿ ಚಿಕನ್ ಸೆಂಟರ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿಗೆ ಬಾಗಿಕೊಂಡಿರುವ ಅಪಾಯಕಾರಿ ಮರ ವಾಹನ ಸವಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹೆದ್ದಾರಿಗೆ ಬಾಗಿಕೊಂಡಿರುವ ಮರದ ಕೊಂಬೆಗಳು ಹಾಗೂ ಹೆಗ್ಗಲುಗಳು ರಸ್ತೆಯತ್ತ ಚಾಚಿಕೊಂಡಿದ್ದು, ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ದಿನನಿತ್ಯ ತಾಗಿಕೊಂಡು ಸಮಸ್ಯೆ ಉಂಟಾಗುತ್ತಿದೆ. ಮರದ ಸ್ಥಿತಿಯನ್ನು ಗಮನಿಸಿದರೆ ಯಾವುದೇ ಸಂದರ್ಭದಲ್ಲಿ ಕೊಂಬೆಗಳು ಅಥವಾ ಮರವೇ ರಸ್ತೆಗೆ ಉರುಳಿ ಬೀಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಹೆದ್ದಾರಿ ಬದಿಯಲ್ಲಿರುವ ಒಣಗಿದ, ಶಿಥಿಲಗೊಂಡ ಹಾಗೂ ರಸ್ತೆಯತ್ತ ಬಾಗಿಕೊಂಡಿರುವ ಮರಗಳು ವಾಹನ ಸವಾರರ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತಿವೆ. ಈಗಾಗಲೇ ವಿವಿಧೆಡೆ ರಸ್ತೆ ಬದಿಯ ಮರಗಳು ಹಾಗೂ ಕೊಂಬೆಗಳು ಉರುಳಿ ಬಿದ್ದು ವಾಹನಗಳಿಗೆ ಹಾನಿಯಾಗಿರುವ ಮತ್ತು ಜೀವಹಾನಿ ಸಂಭವಿಸಿರುವ ಘಟನೆಗಳು ನಡೆದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಶೇಷವಾಗಿ ಹೇರೂರು ಕರಾವಳಿ ಚಿಕನ್ ಸೆಂಟರ್ ಎದುರುಗಡೆಯಿರುವ ಅಪಾಯಕಾರಿ ಮರದ ಕೊಂಬೆಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ಮರವನ್ನು ತೆರವುಗೊಳಿಸುವುದು ಅಥವಾ ಅಪಾಯಕಾರಿ ಭಾಗಗಳನ್ನು ಕಡಿತಗೊಳಿಸುವ ಮೂಲಕ ಹೆದ್ದಾರಿಯಲ್ಲಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಲಾಗಿದೆ.

ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ ಮರಗಳು, ಒಣಗಿದ ಮರಗಳು ಹಾಗೂ ಹೆದ್ದಾರಿಗೆ ಬಾಗಿಕೊಂಡಿರುವ ಮರಗಳ ಸಮಗ್ರ ಪರಿಶೀಲನೆ ನಡೆಸಿ, ಅಪಾಯಕಾರಿಯಾಗಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ, ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಭಯಮುಕ್ತ ಮತ್ತು ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ಸತೀಶ್ ಪೂಜಾರಿ ಕೀಳಂಜೆ ಹಾಗೂ ಸಿದ್ದೇಶ್ ಮಲ್ಪೆ ಅವರು ಸಾರ್ವಜನಿಕರು ಮತ್ತು ವಾಹನ ಸವಾರರ ಪರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.